ಡೈಲಿ ವಾರ್ತೆ: 05/April/2024
ನಿಂಬೆ ಹಣ್ಣಿನ ಉಪಯೋಗಗಳು
ಎಲ್ಲರಿಗೂ ಇಷ್ಟವಾದ, ಪರಿಚಯವಾದ, ಬೇಕಾದ ಹಾಗೂ ಎಲ್ಲಾಕಡೆ ಸಿಗುವ ಚಿರಪರಿಚಿತ ಹಣ್ಣು ನಿಂಬೆಹಣ್ಣು. ಎಲ್ಲಾ ಕಾಲದಲ್ಲೂ ಸಿಗುವ ನಿಂಬೆಹಣ್ಣು ರುಚಿಕರವಾಗಿದ್ದು, ಅಡುಗೆ ಹಾಗೂ ಔಷಧೀಯ ಗುಣಗಳನ್ನು ಹೊಂದಿದ್ದು, ನಿಂಬೆಹಣ್ಣು ಸಿ ಜೀವಸತ್ವ ಹೊಂದಿರುವ ಭಂಡಾರವಾಗಿದ್ದು, ಇದರಲ್ಲಿ ಹುಳಿಯ ಅಂಶವಿರುತ್ತದೆ. ಇದು ಜೀರ್ಣಶಕ್ತಿವರ್ಧಕ, ತದ್ರಿದೋಷನಾಶಕ, ಬುದ್ಧಿವರ್ಧಕ, ಕಣ್ಣಿನ ರೋಗ, ಆಯಾಸ, ಬಿಕ್ಕಳಿಕೆ, ವಾಂತಿ, ಕಾಮಾಲೆ, ಮಿತಿಮೀರಿದ ಪಿತ್ತದೋಷ ಎಲ್ಲವನ್ನೂ ಶಾಂತಗೊಳಿಸುತ್ತದೆ.
ಶರೀರದಲ್ಲಿನ ಒಳಗಿನ ದೂಷಿತ ವಸ್ತುಗಳನ್ನು ಹೊರಗೆಹಾಕುವುದು, ಸಕಲವಿಧವಾದ ಮಾದಕವಸ್ತುಗಳಿಂದಾಗುವ ಉಪದ್ರವಗಳನ್ನು ಶಮನಗೊಳಿಸುವುದು, ಸಂಧಿವಾತ, ಕೀಲುನೋವು, ಯಕೃತ್ತಿನ ವಿಕಾರ, ಪಿತ್ತಕೋಶದ ವಿಕಾರಗಳು, ತಲೆಸುತ್ತುವುದು, ಈ ಎಲ್ಲಾ ಸಮಸ್ಯೆಗಳಿಗೆ ನಿಂಬೆಹಣ್ಣಿನಲ್ಲಿ ಒಳ್ಳೆಯ ಉಪಚಾರ ಸಿಗುತ್ತದೆ. ರಕ್ತವನ್ನು ಶುದ್ಧಗೊಳಿಸುವ ಕಾರ್ಯ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎಲ್ಲದಕ್ಕೂ ನಿಂಬೆಹಣ್ಣು ಹಿತಕರವಾದದ್ದು. ಇದರಲ್ಲಿ ತೇವಾಂಶ, ಸಸಾರಜನಕ, ಕೊಬ್ಬು , ನಾರಿನಂಶ, ಶರ್ಕರ ಪಿಷ್ಠ, ಕ್ಯಾಲ್ಸಿಯಂ ಎ ಮತ್ತು ಸಿ ಜೀವಸತ್ವ ಸಿಗುತ್ತವೆ.
1. ಪಿತ್ತಕೋಶದಲ್ಲಿ ಪಿತ್ತದ ಅಂಶ ಜಾಸ್ತಿಯಾದಾಗ: ಕಣ್ಣು ಮಂಜಾಗುವುದು, ತಲೆಸುತ್ತಿ ಬೀಳುವಂತಾಗುವುದು. ಈ ರೀತಿ ಆದಾಗ ಒಂದು ಲೋಟ ಬಿಸಿನೀರಿಗೆ ನಿಂಬೆರಸವನ್ನು ಹಾಕಿ ಕುಡಿದಾಗ ಬಹಳ ಹಿತವಾಗುವುದು.
2. ಕೀಲುನೋವಿಗೆ: ಬೆಳಿಗ್ಗೆ ಒಂದು, ಸಂಜೆ ಒಂದು ನಿಂಬೆಹಣ್ಣನ್ನು ಕಿತ್ತಳೆ ಹಣ್ಣಿನ ರೀತಿಯಲ್ಲಿ ಬಿಡಿಸಿಕೊಂಡು ತಿನ್ನಬೇಕು.
3. ಮಲೇರಿಯಾಗೆ: ಮಲೇರಿಯಾ ಜ್ವರ ಬಂದಾಗ, ಒಂದು ಲೀಟರ್ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಾಕಿ ಕುದಿಸಿ ಅರ್ಧ ಲೀಟರ್ ಆಗುವವರೆಗೂ ಇಂಗಿಸಿ, ಬೆಳಿಗ್ಗೆ ಬರೀಹೊಟ್ಟೆಯಲ್ಲಿ ಸೇವಿಸಿದರೆ ಅನುಕೂಲವಾಗುವುದರ ಜೊತೆಗೆ, ನಿಂಬೆರಸಕ್ಕೆ ಸ್ವಲ್ಪ ಈರುಳ್ಳಿ ರಸ ಬೆರೆಸಿ ಸೇವಿಸಿದರೆ, ಉತ್ತಮವಾಗುತ್ತದೆ.
4. ಸೌಂದರ್ಯವರ್ಧಕಕ್ಕೆ: ಚಳಿಗಾಲದಲ್ಲಿ ಚರ್ಮ ಬಿರಿಯುವುದು ಸರ್ವೆಸಾಮಾನ್ಯ. ಹಾಲಿನ ಕೆನೆಗೆ ಸ್ವಲ್ಪ ನಿಂಬೆರಸ ಸೇರಿಸಿ ಮುಖ ಮತ್ತು ಕೈ-ಕಾಲುಗಳಿಗೆ ಹಚ್ಚುತ್ತಾ ಬಂದರೆ ಚರ್ಮ ಬಿರಿಯುವುದಿಲ್ಲ.
5. ಮಲಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ: ನಿಂಬೆಗಿಡದ ಹೂ ಮತ್ತು ಬೇರನ್ನು ಅರೆದು ಅಕ್ಕಿ ತೊಳೆದ ನೀರಿನಲ್ಲಿ ಕದಡಿ ಕುಡಿದರೆ ಅನುಕೂಲವಾಗುತ್ತದೆ.
6. ಚೇಳು ಕುಟುಕಿದಾಗ: ಪೊಟ್ಯಾಷಿಯಂ ಫರ್ಮಾಂಗನೇಟ್ ಹರಳನ್ನು ಇಡಿ. ಅದರ ಮೇಲೆ ನಿಂಬೆರಸವನ್ನು ನಿಧಾನವಾಗಿ ಹಿಂಡಿ, ೧೦ ನಿಮಿಷಗಳಲ್ಲಿ ಉರಿ ಹಾಗೂ ನೋವು ಶಾಂತವಾಗುವುದು.
7. ಎದೆ ನೋವು. ಎದೆಯುರಿಯುವುದಕ್ಕೆ: ಜೇನುತುಪ್ಪ ಹಾಗೂ ನಿಂಬೆರಸವನ್ನು ಸಮಪ್ರಮಾಣದಲ್ಲಿ ಸೇವಿಸುವುದರಿಂದ ಎದೆನೋವು, ತಲೆನೋವು ಹಾಗೂ ಎದೆಯುರಿ ಎಲ್ಲದ್ದಕ್ಕೂ ಒಳ್ಳೆಯದು.
8. ವಾಂತಿ ಆದಾಗ: ವಾಂತಿಯಾಗುತ್ತಿದ್ದಾಗ ಏಲಕ್ಕಿ ಹಾಗೂ ಜೀರಿಗೆಯನ್ನು ನಣ್ಣಗೆ ಪುಡಿ ಮಾಡಿ ಒಂದು ಲೋಟ ನೀರಿಗೆ ನಿಂಬೆರಸ ಹಿಂಡಿ, ಈ ಮಿಶ್ರಣವನ್ನು ಗಂಟೆಗೊಮ್ಮೆ ಕುಡಿಯುತ್ತಿದ್ದರೆ ವಾಂತಿ ಹಾಗೂ ಹೊಟ್ಟೆತೊಳಸುವಿಕೆ ಕಡಿಮೆಯಾಗುತ್ತದೆ.
9. ಕ್ಯಾನ್ಸರ್ ರೋಗ ತಡೆಗೆ: ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಇದಕ್ಕೆ ರೋಗನಿರೋಧಕ ಗುಣವಿದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು.
10. ಮೊಡವೆ ನಿವಾರಣೆ ಹಾಗೂ ಮೈಕಾಂತಿಗೆ: ಶುದ್ಧವಾದ ಹಾಲನ್ನು ಚೆನ್ನಾಗಿ ಕಾಯಿಸಿ. ಸ್ವಲ್ಪ ಹಾಲಿಗೆ ನಿಂಬೆರಸ, ಎರಡು ಹನಿ ಗ್ಲಿಸರಿನ್ ಹಾಕಿ ಚೆನ್ನಾಗಿ ಕಲಸಿ, ಮುಖಕ್ಕೆ ರಾತ್ರಿ ಮಲಗುವಾಗ ಹಚ್ಚಿ. ಹಾಗೆ ಅಂಗೈ, ಅಂಗಾಲು ಒಡೆದಿದ್ದರೆ ಹಚ್ಚಿ. ಬೆಳಿಗ್ಗೆ ಕಡಲೆಹಿಟ್ಟು ಹಾಕಿ ಮುಖ ತೊಳೆದರೆ, ಚರ್ಮ ಮೃಧುವಾಗಿ , ಮೊಡವೆಗಳು ಕ್ರಮೇಣ ಮಾಯವಾಗುತ್ತವೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.