ಡೈಲಿ ವಾರ್ತೆ: 12/April/2024

ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಈಶ್ವರಪ್ಪ: ಆಸ್ತಿ ಎಷ್ಟಿದೆ ಗೊತ್ತಾ?

ಶಿವಮೊಗ್ಗ: ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌  ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಇದೀಗ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಇಂದು(ಏಪ್ರಿಲ್ 12) ತಮ್ಮ ಅಪಾರ ಬೆಂಬಲಿರೊಂದಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ವರೆಗೆ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಇನ್ನು ಈಶ್ವರಪ್ಪ ಅವರು ಒಟ್ಟು ಆಸ್ತಿ ಮೌಲ್ಯ 98 ಕೋಟಿ 92 ಲಕ್ಷದ 20 ಸಾವಿರ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 35 ಕೋಟಿ 50 ಲಕ್ಷದ 20 ಸಾವಿರ ಮೌಲ್ಯದ ಆಸ್ತಿ ಇದೆ ಎಂದು ಅಫಿಡೆವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.

ಈಶ್ವರಪ್ಪ ದಂಪತಿ ಬಳಿ ಏನೇನಿದೆ?
ಈಶ್ವರಪ್ಪ ಬಳಿ ಇರುವ ನಗದು 25 ಲಕ್ಷ, ಪತ್ನಿ ಬಳಿ 2 ಲಕ್ಷ ರೂ. ನಗದು ಇದೆ. ಇನ್ನು ಈಶ್ವರಪ್ಪ ಬಳಿ 300 ಗ್ರಾಂ ಚಿನ್ನ, ಎರಡು ಕೆ.ಜಿ ಬೆಳ್ಳಿ ಆಭರಣಗಳು ಇದ್ದರೆ, ಅವರ ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 500 ಗ್ರಾಂ ಚಿನ್ನ, ಕೆ.ಜಿ 5 ಬೆಳ್ಳಿ ಆಭರಣಗಳಿವೆ. ನಿದಿಗೆ ಗ್ರಾಮ ಬಳಿ 1 ಎಕರೆ 31 ಗುಂಟೆ ಕೃಷಿ ಭೂಮಿ ಇದೆ. ಇನ್ನು 4 ಎಕರೆ 24 ಗುಂಟೆ ಕೃಷಿಯೇತರ ಭೂಮಿ ಈಶ್ವರಪ್ಪ ಹೆಸರಿನಲ್ಲಿದೆ. ಹಾಗೇ ಬೆಂಗಳೂರಿನ‌ ಜಯನಗರದಲ್ಲಿ ನಿವೇಶನ, ಶಿವಮೊಗ್ಗದಲ್ಲಿ ವಾಸದ ಮನೆ ಹೊಂದಿದ್ದಾರೆ.

ಈಶ್ವರಪ್ಪ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ 4 ಕೋಟಿ 28 ಲಕ್ಷದ 61 ಸಾವಿರ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಚರಾಸ್ತಿ ಮೌಲ್ಯ 3 ಕೋಟಿ 77 ಲಕ್ಷದ 34 ಸಾವಿರ. ಈಶ್ವರಪ್ಪ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ 10 ಕೋಟಿ 95 ಲಕ್ಷದ 59 ಸಾವಿರ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಸ್ಥಿರಾಸ್ತಿ ಮೌಲ್ಯ 7 ಲಕ್ಷದ 31 ಸಾವಿರ ರೂಪಾಯಿ.
ಇನ್ನು ಈಶ್ವರಪ್ಪ ಹೆಸರಿನಲ್ಲಿ 5 ಕೋಟಿ 87 ಲಕ್ಷದ 39 ಸಾವಿರ ರೂಪಾಯಿ ಸಾಲ ಇದ್ದರೆ, ಅವರ ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 70 ಲಕ್ಷದ 80 ಸಾವಿರದ 13 ಸಾವಿರ ಸಾಲ ಇದೆ ಎಂದು ನಾಮಪತ್ರದ ಅಫಿಡೆವಿಟ್ನಲ್ಲಿ ಉಲ್ಲೇಖಿಸಿದ್ದಾರೆ.