ಡೈಲಿ ವಾರ್ತೆ: 16/April/2024

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಜೆಪಿ ಹೆಗ್ಡೆಯ “ನನ್ನ ಕನಸು” ಪ್ರಣಾಳಿಕೆ ಬಿಡುಗಡೆ

ಉಡುಪಿ: ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ತನ್ನದೇ ಆದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.


“ಸಮೃದ್ಧ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರ ನನ್ನ ಕನಸು” ಹೆಸರಿನ ಈ ಪ್ರಣಾಳಿಕೆಯಲ್ಲಿ ಕೃಷಿ, ತೋಟಗಾರಿಕೆ ಮತ್ತು ಹೈನು ಅಭಿವೃದ್ಧಿ, ಮಲೆನಾಡು ಅಭಿವೃದ್ಧಿ, ನಿವೇಶನ ರಹಿತ ಹಾಗೂ ಭೂ ರಹಿತರಿಗೆ ಸೌಲಭ್ಯ, ಮೀನುಗಾರಿಕೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಆರೋಗ್ಯ ಮತ್ತು ಶಿಕ್ಷಣದ ಕುರಿತು ತಮ್ಮದೇ ಆದ ನೀಲಿನಕ್ಷೆಯನ್ನು ರೂಪಿಸಿದ್ದಾರೆ.
ಜಯಪ್ರಕಾಶ್‌ ಹೆಗ್ಡೆಯವರು ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ ತಾವು ಪ್ರತಿನಿಧಿಸಿದ ಹಾಗೂ ಪ್ರತಿನಿಧಿಸುತ್ತಿರುವ ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುತ್ತಾರೆ. ಪಕ್ಷ, ಜಾತಿ, ಮತ ಯಾವುದನ್ನೂ ಲೆಕ್ಕಿಸದೆ ಕ್ಷೇತ್ರದ ಅಭಿವೃದ್ಧಿಯನ್ನೇ ಗಮನದಲ್ಲಿರಿಸಿಕೊಂಡು ಕೆಲಸ ಮಾಡುವ ರಾಜ್ಯದ ಅಪೂರ್ವ ರಾಜಕಾರಣಿ ಜಯಪ್ರಕಾಶ ಹೆಗ್ಡೆಯವರ ಯೋಜನೆ ಹಾಗೂ ಯೋಚನೆ ಯಾವಾಗಲೂ ಅಭಿವೃದ್ಧಿಯ ಪರವಾಗಿರುತ್ತದೆ.


ಮೀನುಗಾರರಿಗೆ ಹೊಸ ಬದುಕು:
ಮೀನುಗಾರರು ಹಾಗೂ ಜಯಪ್ರಕಾಶ ಹೆಗ್ಡೆ ನಡುವಿನ ಸಂಬಂಧ ನಾಲ್ಕು ದಶಕಗಳಿಂದ ನಿರಂತರವಾದುದು. ಕರಾವಳಿಯ ಬದುಕು ಸದಾ ಚಲನಶೀಲವಾಗಿರಬೇಕಾದರೆ ಇಲ್ಲಿಯ ಮೀನುಗಾರರ ಬದುಕು ಯಶಸ್ಸಿನಿಂದ ಕೂಡಿರುವುದು ಗಮನಾರ್ಹ. ಇದನ್ನು ಗಮನಿಸಿದ ಹೆಗ್ಡೆಯವರು ಮೀನುಗಾರರ ಬದುಕಿಗಾಗಿ ಹಿಂದಿನಿಂದಲೂ ಗಮನಹರಿಸುತ್ತ, ಆ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದವರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಯ ಸಾಧಿಸಿದರೆ ತಾನು ಈ ಸಮುದಾಯಕ್ಕೆ ಏನು ಮಾಡಬೇಕೆಂಬುದನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಯೋಚಿಸಿ ಯೋಜನೆಯನ್ನು ರೂಪಿಸಿದ್ದಾರೆ. ಮೂಲಭೂತ ಸೌಕರ್ಯಗಳಲ್ಲಿ ಪ್ರಮುಖವಾಗಿರುವ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ ನೀಡಿದ್ದಾರೆ. ಡ್ರಜ್ಜಿಂಗ್‌ ಮತ್ತು ಬ್ರೇಕ್‌ ವಾಟರ್‌ ಯೋಜನೆ, ಬಂದರಿನ ತಾಜ್ಯ ವಿಲೇವಾರಿಗೆ ಒತ್ತು ನೀಡುವುದು ಪ್ರಮುಖವಾಗಿದೆ. ಅಸಂಘಟಿತ ಕಾರ್ಮಿಕರಿಗೆ ಸಿಗುವ ಸರಕಾರದ ಸೌಲಭ್ಯಗಳು ಮೀನುಗಾರರಿಗೂ ಸಿಗುವಂತೆ ಮಾಡುವುದು, ಸಾಂಪ್ರದಾಯಿಕ ಮಹಿಳಾ ಮೀನುಗಾರರಿಗೆ ಬಡ್ಡಿರ ರಹಿತ ಸಾಲ, ನಿವೃತ್ತ ಮೀನುಗಾರರಿಗೆ ಪಿಂಚಣಿ ಸೌಲಭ್ಯ ಒದಗಿಸುವುದು ಹೆಗ್ಡೆ ಅವರ ಪ್ರಣಾಳಿಕೆಯಲ್ಲಿ ಪ್ರಮುಖವಾದುದು.


ಸಂಕಷ್ಟ ಪರಿಹಾರ 10ಲಕ್ಷಕ್ಕೆ ಏರಿಕೆ:
ಜಯಪ್ರಕಾಶ್‌ ಹೆಗ್ಡೆ ಅವರು ಸಚಿವರಾದಾಗಿನಿಂದ ಸಂಕಷ್ಟದಲ್ಲಿರುವ ಮೀನುಗಾರರಿಗೆ ಸರಕಾರದ ನೆರವು ಸಿಗಲಾರಂಭಿಸಿತು. ಈ ನೆರವನ್ನು ಕರಾವಳಿಯ ಮೀನುಗಾರರು ಸದಾ ಸ್ಮರಿಸುತ್ತಾರೆ. ಈ ಬಾರಿ ಜಯ ಸಾಧಿಸಿದರೆ ಮೀನುಗಾರರ ಸಂಕಷ್ಟ ಪರಿಹಾರ ಧನ 10ಲಕ್ಷಕ್ಕೆ ಹೆಚ್ಚಿಸಲು ಮತ್ತು ಮತ್ಸ್ಯಾಶ್ರಯ ಯೋಜನೆಯ ಸಹಾಯಧನವನ್ನು 5 ಲಕ್ಷಕ್ಕೆ ಏರಿಸಲು ಪ್ರಯತ್ನಿಸಲಾಗುವುದು ಎಂದಿದ್ದಾರೆ. ದಿನಕ್ಕೆ 500 ಲೀಟರ್‌ ಡೀಸೆಲ್‌ನೀಡಲು ಯತ್ನಿಸುವುದು, ಸುರ್ಮಿ, ಫಿಶ್ಮೀಲ್‌ ಮತ್ತು ಐಸ್‌ ಪ್ಲಾಂಟ್‌ ಮುಂತಾದ ಕಾರ್ಖಾನೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲು ಯತ್ನಿಸುವುದು ಹೆಗ್ಡೆ ಅವರ ಯೋಜನೆಯಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮೀನುಗಾರಿಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾವುದು ಎಂದಿದ್ದಾರೆ.


ಅಡಿಕೆ ಸಂಶೋಧನಾ ಕೇಂದ್ರ: ರಾಜ್ಯದಲ್ಲಿ ಅಡಿಕೆ ಸಂಶೋಧನಾ ಕೇಂದ್ರವಿದ್ದರೂ ಅದು ನಿಷ್ಕ್ರಿಯವಾಗಿವೆ. ಈ ಕೇಂದ್ರವನ್ನು ಕ್ರಿಯಾಶೀಲವಾಗುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ನೇಮಿಸಿದ್ದ ಗೋರಖ್‌ ಸಿಂಗ್‌ ವರದಿಯ ಅನುಷ್ಠಾನಕ್ಕಾಗಿ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಿದ್ದರೂ ಅಲ್ಲಿ ಕೆಎಂಎಫ್‌ ಹಾಲಿನ ಘಟಕ ಇಲ್ಲ. ಹೊಸ ಹಾಲಿನ ಘಟಕವನ್ನು ಸ್ಥಾಪಿಸಿ ಇಲ್ಲಿಯ ಹೈನುಗಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ಹೆಗ್ಡೆ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿರುತ್ತಾರೆ.
ವರ್ಷಕ್ಕೊಮ್ಮೆ ಕೃಷಿ ಮೇಳ ಮತ್ತು ವರ್ಷಕ್ಕೊಮ್ಮೆ ಉದ್ಯೋಗ ಮೇಳ ನಡೆಸುವುದು, ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೆಗ್ಡೆ ಅವರು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.