ಡೈಲಿ ವಾರ್ತೆ: 27/April/2024

ಉಪ್ಪಿನಂಗಡಿ: ವಿದ್ಯುತ್ ಶಾರ್ಟ್ ಸಕ್ಯೂಟ್ ಯಿಂದ ಮನೆಯಲ್ಲಿ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಮನೆ ಸಾಮಗ್ರಿ ಬೆಂಕಿಗಾಹುತಿ!

ಉಪ್ಪಿನಂಗಡಿ:ವಿದ್ಯುತ್ ಶಾರ್ಟ್ ಸಕ್ಯೂಟ್ ಯಿಂದ ಮನೆಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಮನೆ ಸಾಮಗ್ರಿ ಬೆಂಕಿಗಾಹುತಿಯಾದ ಘಟನೆ ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಶನಿವಾರ ನಡೆದಿದೆ.

ಅಸ್ಲಂ ಎಂಬವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ.
ಮನೆಯ ಮಾಲಕ ವಿದೇಶದಲ್ಲಿದ್ದು, ಅವರ ಪತ್ನಿ ಮನೆಗೆ ಬೀಗ ಹಾಕಿ ತನ್ನ ಮಕ್ಕಳೊಂದಿಗೆ ಪೇಟೆಗೆ ಹೋಗಿದ್ದರು. ಆ ಸಂದರ್ಭದಲ್ಲಿ
ಮನೆಯೊಳಗಿನಿಂದ ಹೊಗೆ ಹೊರಬರುತ್ತಿರುವುದನ್ನು ಕಂಡ ಸ್ಥಳೀಯರು ಹತ್ತಿರ ಬಂದು ಪರಿಶೀಲಿಸಿದಾಗ ಮನೆಯೊಳಗೆ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರೂ, ಅದು ಅಸಾಧ್ಯವಾದಾಗ ಅಗ್ನಿ ಶಾಮಕ ದಳವನ್ನು ಸ್ಥಳಕ್ಕೆ ಕರೆಸಿ ಬೆಂಕಿಯನ್ನು ನಂದಿಸಲಾಯಿತು.

ಆಕಸ್ಮಿಕ ಬೆಂಕಿಯಿಂದಾಗಿ ಮನೆಯೊಳಗಿದ್ದ ಫ್ರಿಡ್ಜ್ ವಾಷಿಂಗ್ ಮೆಷಿನ್, ಪೀಠೋಪಕರಣಗಳ, ಬಟ್ಟೆಬರೆ, ಹಾಸಿಗೆ ಸಹಿತ ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿವೆ ಎಂದು ಅಗ್ನಿಶಾಮಕದಳದ ಠಾಣಾಧಿಕಾರಿ ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆಯಷ್ಟೇ ಈ ಮನೆಯನ್ನು ನಿರ್ಮಿಸಲಾಗಿತ್ತು ಎಂದು ತಿಳಿದುಬಂದಿದೆ.