ಡೈಲಿ ವಾರ್ತೆ: 28/April/2024

ಹಾಸನದ ಅಶ್ಲೀಲ ವಿಡಿಯೋ ಪೆನ್‌ ಡ್ರೈವ್ ಪ್ರಕರಣ: ಎಸ್‌ಐಟಿ ತನಿಖೆಗೆ ರಾಜ್ಯ ಸರಕಾರ ಆದೇಶ

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಹಾಸನದ ಅಶ್ಲೀಲ ವಿಡಿಯೋ ಪೆನ್‌ ಡ್ರೈವ್ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಮಾಹಿತಿಯನ್ನು ನೀಡಿದ್ದು, ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹಾಸನದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ನೂರಾರು ಅಶ್ಲೀಲ ವಿಡಿಯೋಗಳು, ಚಿತ್ರಗಳು ವೈರಲ್‌ ಆಗಿತ್ತು. ಇದರ ಬೆನ್ನಲ್ಲಿ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲಿ ಇದೀಗ ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿ ಆದೇಶವನ್ನು ಹೊರಡಿಸಿದೆ.

ಇನ್ನು ಪೆನ್ ಡ್ರೈವ್ ಲೈಂಗಿಕ ಹಗರಣದ ರೂವಾರಿ ಸೇರಿದಂತೆ, ಇದರಲ್ಲಿ ಪಾಲ್ಗೊಂಡವರನ್ನು ಬಂಧಿಸಿ ತನಿಖೆ ನಡೆಸಲು ಒತ್ತಾಯಿಸಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಏ.29ರಂದು ಪ್ರತಿಭಟನೆ ಮಾಡುವುದಾಗಿ ಘೋಷಿಸಿದೆ.
ಲೋಕಸಭೆ ಹೊಸ್ತಿಲಲ್ಲೇ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ವೈರಲ್‌ನಿಂದ ಜೆಡಿಎಸ್‌ನಲ್ಲಿ ಬಿರುಗಾಳಿ ಬೀಸುವ ಜೊತೆಗೆ ಮೈತ್ರಿ ಬಿಜೆಪಿಗೂ ದೊಡ್ಡ ಮಟ್ಟದಲ್ಲಿ ಇರಿಸು-ಮುರಿಸು ಉಂಟು ಮಾಡಿದೆ.

ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಸ್ಪರ್ಧಿಸಿರುವ ಹಾಸನ ಸೇರಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏ.26ರಂದು ಮತದಾನ ನಡೆದಿತ್ತು. ಪ್ರತಿ ಚುನಾವಣೆಯಲ್ಲೂ ಕುಟುಂಬ ಸಮೇತರಾಗಿ ಬಂದು ಮತ‌ ಚಲಾಯಿಸುತ್ತಿದ್ದ ಪ್ರಜ್ವಲ್, ಈ ಬಾರಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯಲ್ಲಿ ಏಕಾಂಗಿಯಾಗಿ ಬಂದು ಮತ ಚಲಾವಣೆ ಮಾಡಿದ್ದರು.
ಅಶ್ಲೀಲ ವೀಡಿಯೋ ಪ್ರಕರಣವು ರಾಜ್ಯದ ಮೂಲೆಮೂಲೆಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಶನಿವಾರ ಮುಂಜಾನೆ ಮೂರು ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ತೆರಳಿರುವುದಾಗಿ ವರದಿಯಾಗಿದೆ.