ಡೈಲಿ ವಾರ್ತೆ: 09/ಮೇ /2024

ಸಾಲಿಗ್ರಾಮದಲ್ಲಿ ಶ್ರೀ ಶಂಕರ ಜಯಂತಿ ಉತ್ಸವಕ್ಕೆ ಚಾಲನೆ:
ಶ್ರೀ ಶಂಕರಾಚಾರ್ಯರ ಧರ್ಮ ನಿಷ್ಠೆ – ಶೃದ್ಧೆ- ಭಕ್ತಿ ಅನನ್ಯವಾದುದು – ಡಾ.ಕೆ. ಎಸ್. ಕಾರಂತ

ಸಾಲಿಗ್ರಾಮ: ಭಗವತ್ಪಾದ ಶ್ರೀ ಶಂಕರಾಚಾರ್ಯರ ಧರ್ಮ ನಿಷ್ಠೆ ,ಶೃದ್ಧೆ , ಭಕ್ತಿ ಹಾಗೂ ಛಲ ಅನನ್ಯವಾದುದು. ಅವುಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಜೀವನದಲ್ಲಿ ಅಳವಡಿಸಿಕೊಳ್ಳುವರೇ ಮಾರ್ಗದರ್ಶನ ಮಾಡಬೇಕಾದುದು ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್. ಕಾರಂತ ಕರೆ ನೀಡಿದರು.
ಅವರು ಶ್ರೀ ಗುರುನರಸಿಂಹ ದೇವಸ್ಥಾನ, ಬ್ರಾಹ್ಮಣ ಮಹಾಸಭಾ, ಸಾಲಿಗ್ರಾಮ ಹಾಗೂ ಉಡುಪಿ ಜಿಲ್ಲಾ ಶಾಂಕರತತ್ವ ಪ್ರಚಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಂಕರ ಜಯಂತಿ ಉತ್ಸವಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ವಸಂತ ವೇದ ಶಿಬಿರದ ವಿದ್ಯಾರ್ಥಿಗಳು ಹಾಗೂ ಅವರ ರಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ಜಿಲ್ಲಾ ಶಾಂಕರತತ್ವ ಪ್ರಚಾರ ಸಮಿತಿಯ ಸಹ ಸಂಚಾಲಕಿ ಶ್ರೀಮತಿ ಸವಿತಾ ಎರ್ಮಾಳ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗಾಯತ್ರೀ ಮಂತ್ರದ ವಿಶೇಷತೆಯನ್ನು ತಿಳಿಸಿದರು ಹಾಗೂ ಸಮಿತಿಯು ಈ ಒಂದು ತಿಂಗಳ ಅವಧಿಯಲ್ಲಿ ಉಡುಪಿ ಜಿಲ್ಲಾದ್ಯಂತ ಸನಾತನ ಹಿಂದೂ ಸಂಸ್ಕೃತಿಯ ಬಗ್ಗೆ ಜನ ಜಾಗೃತಿ ಮೂಡಿಸುವರೇ ಶ್ರೀ ಶಂಕರ ಜಯಂತಿ ಸಂಬಂಧ 500 ಕ್ಕೂ ಮಿಕ್ಕಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಅತಿಥಿ ಉಪನ್ಯಾಸ ನೀಡಿದ ವೇದ ಮೂರ್ತಿ ಸೂರಾಲು ದೇವಿ ಪ್ರಸಾದ ತಂತ್ರಿ ಯವರು ಶ್ರೀ ಶಂಕರ ಭಗವತ್ಪಾದರು ಎಳವೆಯಲ್ಲೇ ಮೈಗೂಡಿಸಿಗೊಂಡ
ಶೃದ್ಧೆ, ಧರ್ಮ ನಿಷ್ಠೆ, ಛಲಗಳ ಬಗ್ಗೆ ಮಾಹಿತಿ ನೀಡುತ್ತಾ ಸನಾತನ ಹಿಂದೂ ಧರ್ಮವನ್ನು ಪುನರ್ ಸಂಘಟಿಸುವಲ್ಲಿ ನಡೆಸಿದ ಪ್ರಯತ್ನಗಳು, ಭರತಖಂಡದಾದ್ಯಂತ ಸನಾತನ ವೈದಿಕ ಸಂಸ್ಕೃತಿಯನ್ನು ಭದ್ರಗೊಳಿಸುವಲ್ಲಿ
ಶ್ರೀ ಶಂಕರರು ಕಾರ್ಯತತ್ಪರರಾದ ರೀತಿಯನ್ನು ವಿವರಿಸುತ್ತಾ ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿ ಆಚರಣೆಗಳ ಬಗ್ಗೆ ಯಾರಿಗೂ ಕೀಳರಿಮೆ ಸಲ್ಲದು ಎಂದು ಕಿವಿಮಾತು ಹೇಳಿದರು.
ಸಾಲಿಗ್ರಾಮ ವಲಯ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶ್ರೀ ಪಟ್ಟಾಭಿರಾಮ ಸೋಮಯಾಜಿ ಸ್ವಾಗತಿಸಿದರು.
ಕಾರ್ಯದರ್ಶಿ ಶ್ರೀ ಕೆ ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು,
ದೇವಳದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು, ವಸಂತ ವೇದ ಶಿಬಿರದ 400ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಹಾಗೂ ಅವರ ರಕ್ಷಕರು ಉಪಸ್ಥಿತರಿದ್ದರು.