ಡೈಲಿ ವಾರ್ತೆ: 09/ಮೇ /2024
SSLC ಫೇಲ್: ರಾಜ್ಯದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ- ಮಂಡ್ಯ ವಿದ್ಯಾರ್ಥಿ ನೇಣಿಗೆ ಶರಣು, ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು, ಚಿಕ್ಕೋಡಿ ವಿದ್ಯಾರ್ಥಿನಿ ವಿಷ ಸೇವನೆ!
ಮಂಡ್ಯ: ರಾಜ್ಯಾದ್ಯಂತ ಇಂದು ಬೆಳಗ್ಗೆ 10.30ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಮತ್ತೊಂದು ಘಟನೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಫೇಲಾದ ವಿದ್ಯಾರ್ಥಿನಿ ವಿಷ ಸೇವನೆ ಮಾಡಿದ್ದಾಳೆ. ಮಂಡ್ಯದಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ವಿದ್ಯಾರ್ಥಿನಿ.
ಮಂಡ್ಯದಲ್ಲಿ ವಿದ್ಯಾರ್ಥಿಯೊಬ್ಬ ತಾನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿದ್ದೇನೆಂದು ಮನನೊಂದು ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಈ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ತಗ್ಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹದೇವು ಎನ್ನುವವರ ಪುತ್ರ ಲಿಖಿತ್ (15) ಮೃತ ಬಾಲಕ. ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡಲು ಶಾಲೆಯ ಬಳಿ ಹೋದಾಗ ಎರಡು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಿಯಾ ಎಂದು ಶಿಕ್ಷಕರು ತಿಳಿಸಿದ್ದಾರೆ. ಈ ವೇಳೆ ತುಂಬಾ ಬೇಸರಗೊಂಡಿದ್ದ ನಿಖಿಲ್‌ನನ್ನು ಶಿಕ್ಷಕರು ಸಮಾಧಾನ ಮಾಡಿ, ಮುಂದಿನ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಧೈರ್ಯ ತುಂಬಿ ಮನೆಗೆ ಕಳುಹಿಸಿದ್ದರು.
ಆದರೆ, ನಿಖಿಲ್ ಮನೆಗೆ ಹೋದರೆ ಅಲ್ಲಿ ಫೇಲ್ ಆಗಿರುವ ವಿಚಾರ ತಿಳಿದು ಮನೆಯವರು ಬೈಯಬಹುದು, ಇದರಿಂದ ನನಗೆ ಅವಮಾನ ಆಗುತ್ತದೆ ಎಂದು ಮನನೊಂದು ಜಮೀನಿನ ಕಡೆಗೆ ಹೋಗಿದ್ದಾನೆ. ಅಲ್ಲಿ ಹಸು ಕಟ್ಟಲು ಇಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ಪಕ್ಕದಲ್ಲಿದ್ದ ಮರಕ್ಕೆ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. .
ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು:
ಚಿಕ್ಕಬಳ್ಳಾಪುರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ತಾಲ್ಲೂಕಿನ ಗಂಗರೇಕಾಲುವೆ ಗ್ರಾಮದ ಜಿ.ಎನ್.ವೈಷ್ಣವಿ ಎಂಬ ವಿದ್ಯಾರ್ಥಿನಿ ಗುರುವಾರ ಸಂಜೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕವಿತಾ ಮತ್ತು ನರಸಿಂಹಮೂರ್ತಿ ದಂಪತಿ ಪುತ್ರಿ ವೈಷ್ಣವಿ ತಾಲ್ಲೂಕಿನ ಮಂಚನಬಲೆ ಗ್ರಾಮದ ಬಿಜಿಎಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಬೇಸರಗೊಂಡಿದ್ದಳು. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
ಚಿಕ್ಕೋಡಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ: ಮತ್ತೊಂದೆಡೆ ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯಲ್ಲಿಯೂ ವಿದ್ಯಾರ್ಥಿನಿಯೊಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನೆಯಲ್ಲಿ ಒಟ್ಟಿದ್ದ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ, ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದಿದೆ. ಕೂಡಲೇ ವಿದ್ಯಾರ್ಥಿನಿ ಒದ್ದಾಡುವುದನ್ನು ನೋಡಿದ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ವಿದ್ಯಾರ್ಥಿನಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಸ್ಪತ್ರೆಗೆ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಮೇಕಲಮರಡಿ ಅವರು ಭೇಟಿ ಮಾಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಮಂಡ್ಯ ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ವಿದ್ಯಾರ್ಥಿನಿ:
ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ್ದಾಳೆ.
ಅಮೃತ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ ನಗರಕೆರೆ ಗ್ರಾಮದ ಸರ್ಕಾರಿ ಅನುದಾನಿತ ಪೂರ್ಣಿಮಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಅಮೃತ ಶೇ.57 ಅಂಕ ಪಡೆದು ತೇರ್ಗಡೆ ಹೊಂದಿದ್ದಳು.
ಆದರೆ ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟೆ ಎಂದು ತಿಳಿದು ಮನೆಯಲ್ಲಿ ಯಾರು ಇಲ್ಲದಾಗ ನೇಣಿಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.