ಡೈಲಿ ವಾರ್ತೆ: 10/ಮೇ /2024
ಕ್ಯಾಸನಮಕ್ಕಿ: ಪಾನಮತ್ತನಾಗಿದ್ದ ವ್ಯಕ್ತಿಯಿಂದ ಮನೆಗೆ ಬೆಂಕಿ – ಆರೋಪಿಯ ಬಂಧನ
ಕೋಟ: ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಎಂಬಲ್ಲಿ ವ್ಯಕ್ತಿಯೋರ್ವ ರಾತ್ರಿ ವೇಳೆ ಪಾನಮತ್ತನಾಗಿ ಬಂದು ಮನೆಗೆ ಬೆಂಕಿ ಹೆಚ್ಚಿದ ಘಟನೆ ಮೇ 9ರ ಮುಂಜಾನೆ ಸಂಭವಿಸಿದೆ.
ಕ್ಯಾಸನಮಕ್ಕಿ ನಿವಾಸಿ ಶುಭಲತಾ ಹಾಗೂ ಹಾಲಾಡಿ ಮಾವಿನ ಕೊಡ್ಲುವಿನ ನಿವಾಸಿ ದಿನೇಶ್ ಮೊಗವೀರ (36) ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, 7 ತಿಂಗಳ ಮಗು ಹೊಂದಿದ್ದರು. ಆದರೆ ದಿನೇಶ್ ಮೊಗವೀರ ಅವರು ಮೇ 8ರ ರಾತ್ರಿ ಪಾನಮತ್ತನಾಗಿ ಬಂದು ಪತ್ನಿ ಹಾಗೂ ಅವರ ಮನೆಯವರ ಜತೆಗೆ ಅನುಚಿತವಾಗಿ ವರ್ತಿಸಿ ಗಲಾಟೆಗೆ ಮುಂದಾಗಿದ್ದಾನೆ. ಗಲಾಟೆ ನಿಲ್ಲಿಸಲು ಸಾಧ್ಯವಾಗದಿದ್ದಾಗ 112ಕ್ಕೆ ತುರ್ತುಕರೆ ಮಾಡಿ ದೂರು ನೀಡಿದರು. ಈ ಸಂದರ್ಭದಲ್ಲಿ ಕೋಟ ಪೊಲೀಸ್ ಎಎಸ್‌ಐ ಜಯಪ್ರಕಾಶ್ ರೈ ಹಾಗೂ ಸಿಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೂ ಕೂಡ ಅಡ್ಡಿಪಡಿಸಿದ್ದಾನೆ.
ಎಎಸ್‌ಐ ಸಮಯ ಪ್ರಜ್ಞೆ ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತಾಯಿ ಮತ್ತು ಮಗುವಿನ ಸುರಕ್ಷತೆಯ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಲು ಮನೆಯವರಿಗೆ ತಿಳಿಸಿದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತ ದಿನೇಶ್ ಮೊಗವೀರ ಮನೆಯ ಬಾಗಿಲು ಮುರಿದು ಬೆಂಕಿ ಹೆಚ್ಚಿಸಿದ್ದಾನೆ ಎಂದು ಹೇಳಲಾಗಿದ್ದು, ಪರಿಣಾಮ ಇಡೀ ಮನೆಯೇ ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ಗುರಿಯಾಗಿದೆ.
ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಮನೆಯೊಳಗಿದ್ದ ಸುಮಾರು ರೂ.3 ಲಕ್ಷಕ್ಕೂ ಅಧಿಕ ಮೊತ್ತದ ಹೊಟೇಲ್‌ನ ಸಾಮಗ್ರಿಗಳು, ವಿದ್ಯುತ್ ಸಂಪರ್ಕ ಹೆಂಚು, ಪಕ್ಕಾಸು, ದವಸ ಧಾನ್ಯಗಳು, ಬಟ್ಟೆ, ಕಪಾಟು ಬೆಂಕಿಗೆ ಆಹುತಿಯಾಗಿದೆ.
ತಲೆಮರಿಸಿಕೊಂಡಿದ್ದ ದಿನೇಶ್ ಮೊಗವೀರನಿಗಾಗಿ ಕೋಟ ಪೊಲೀಸರು ಅವನ ಮೊಬೈಲ್ ಜಾಡು ಹಿಡಿದು ಶೋಧಕಾರ್ಯಕ್ಕೆ ಮುಂದಾದರು. ತದನಂತರ ಹಾಲಾಡಿ ಪರಿಸರದಲ್ಲಿಯೇ ವ್ಯಕ್ತಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ತೇಜಸ್ವಿ, ಪೊಲೀಸ್ ಸಿಬಂದಿ ಪ್ರಸನ್ನ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.