ಡೈಲಿ ವಾರ್ತೆ: 30/ಮೇ /2024

ಬ್ರಹ್ಮಾವರದಲ್ಲಿ ಮೇ. 31 ರಿಂದ ಮೂರು ದಿನ ಹಲಸು ಮತ್ತು ಹಣ್ಣು ಮೇಳ 

ಬ್ರಹ್ಮಾವರ :ರೋಟರಿ ಕ್ಲಬ್ ಬ್ರಹ್ಮಾವರ,  ಸೌತ್ ಕೆನರಾ ಫೋಟೋಗ್ರಾಫರ್ಸ್  ಅಸೋಸಿಯೇಶನ್  ದಕ್ಷಿಣಕನ್ನಡ,  ಉಡುಪಿ ಜಿಲ್ಲೆ  ಬ್ರಹ್ಮಾವರ ವಲಯ, ಮಂಗಳೂರಿನ ವಿಜಯ  ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ,  ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು  ತೋಟಗಾರಿಕೆ  ಸಂಶೋಧನಾ  ಕೇಂದ್ರ ಹಾಗೂ  ಡಿಪ್ಲೋಮಾ ಕೃಷಿ ಮಹಾ  ವಿದ್ಯಾಲಯದ ಜಂಟಿ ಆಶ್ರಯದಲ್ಲಿ ಹಲಸು  ಮತ್ತು ಹಣ್ಣು ಮೇಳ  ಇದೇ 31ರಿಂದ ಜೂನ್‌ 2ರವರೆಗೆ ಬ್ರಹ್ಮಾವರದ ಎಸ್‌.ಎಂ.ಎಸ್‌ ಸಮುದಾಯ ಭವನ  ವಠಾರದಲ್ಲಿ ನಡೆಯಲಿದೆ  ಎಂದು ಬ್ರಹ್ಮಾವರ  ರೋಟರಿ ಕ್ಲಬ್ ಅಧ್ಯಕ್ಷ  ಉದಯಕುಮಾರ್  ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ  ಬಯಲುಸೀಮೆಯ ಸಿಹಿಯಾದ ಮಾವಿನ ಹಣ್ಣು  ಹಾಗೂ ಕೆಂಪು ಹಲಸು ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು ದೊರಕಲಿದೆ. ಅಲ್ಲದೆ ನೂರಾರು ಮಳಿಗೆಗಳು, ಹಲವಾರು  ತಿನಿಸುಗಳು,  ಹಣ್ಣಿನ ಬಗೆ  ಬಗೆಯ ಐಸ್  ಕ್ರೀಮ್ ಗಳು,  ಹಲಸಿನ  ಹೋಳಿಗೆ, ವಿವಿಧ  ಹಣ್ಣುಗಳು,  ತರಕಾರಿ  ಬೀಜಗಳು, ಹಣ್ಣಿನ ಉತ್ಪನ್ನಗಳು,  ಆಯುರ್ವೇದಿಕ್  ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು ದೊರಕಲಿದೆ ಎಂದು ಅವರು ತಿಳಿಸಿದರು.

ಮೂರು ದಿನಗಳ ಕಾಲ ನಡೆಯವ ಹಲಸು ಮತ್ತು ಹಣ್ಣು ಮೇಳದಲ್ಲಿ ಕೋಲಾರ,  ರಾಮನಗರ ಹಾಗೂ  ಮಲೆನಾಡು ಹಾಗೂ ಸ್ಥಳೀಯ ಪ್ರದೇಶದಿಂದ ಮಾವು, ಹಲಸು ಹಾಗೂ ಇತರ ಹಣ್ಣುಗಳ  ಹಲವಾರು  ಸ್ಟಾಲ್ ಗಳು ಅಲ್ಲದೇ ರೈತರಿಗೆ  ಮಾಹಿತಿ  ನೀಡಲು  ಸತತ 3 ದಿನವೂ ರೈತ ಮಾಹಿತಿ ಕೇಂದ್ರ ಮತ್ತು ಕಾರ್ಯಾಗಾರ, ವಿಚಾರಗೋಷ್ಟಿಗಳು ನಡೆಯಲಿದೆ ಎಂದು ತಿಳಿಸಿದರು.

ಈ  ಸಂದರ್ಭ ಅಲ್ವಿನ್‌ ಅಂದ್ರಾದೆ, ಡಾ.ಬಿ.ಧನಂಜಯ, ಆರೂರು ಶ್ರೀಧರ ಶೆಟ್ಟಿ, ಸಂಕಯ್ಯ ಶೆಟ್ಟಿ, ಗಣೇಶ ಶೆಟ್ಟಿ ಇದ್ದರು.