ಡೈಲಿ ವಾರ್ತೆ: 01/ಜೂ./2024

ಚೆನ್ನೈ- ಮುಂಬೈ ಇಂಡಿಗೋ ವಿಮಾನಕ್ಕೆ ಮತ್ತೆ ಬಾಂಬ್ ಬೆದರಿಕೆ!

ಚೆನ್ನೈ:  ಚೆನ್ನೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಮತ್ತೆ ಬಾಂಬ್ ಬೆದರಿಕೆ ಬಂದಿದೆ. ಬೆದರಿಕೆ ಬೆನ್ನಲ್ಲೇ ಮುಂಬೈನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಮುಂಬೈನಲ್ಲಿ ಇಳಿದ ನಂತರ ವಿಮಾನ ಸಿಬ್ಬಂದಿ ಪ್ರೊಟೋಕಾಲ್ ಅನುಸರಿಸಿದರು. ಭದ್ರತಾ ಏಜೆನ್ಸಿ ಮಾರ್ಗಸೂಚಿಗಳ ಪ್ರಕಾರ ವಿಮಾನವನ್ನು ಪ್ರತ್ಯೇಕಗೊಳಿಸಲಾಯಿತು.

ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ. ವಿಮಾನವು ಪ್ರಸ್ತುತ ತಪಾಸಣೆಗೆ ಒಳಪಟ್ಟಿದೆ. ಎಲ್ಲಾ ಭದ್ರತಾ ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರ ವಿಮಾನವನ್ನು ಟರ್ಮಿನಲ್ ಪ್ರದೇಶದಲ್ಲಿ ಹಿಂತಿರುಗಿಸಲಾಗುತ್ತದೆ ಎಂದು ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಎರಡನೇ ಘಟನೆಯಾಗಿದೆ. ಈ ಹಿಂದೆ ಮೇ 28 ರಂದು ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನಕ್ಕೆ ಇದೇ ರೀತಿಯ ಬೆದರಿಕೆ ಬಂದಿತ್ತು. ಬೆದರಿಕೆಯ ನಂತರ ವಿಮಾನದಲ್ಲಿದ್ದ ಪ್ರಯಾಣಿಕರನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ನಿರ್ಗಮನದ ಮೂಲಕ ಸ್ಥಳಾಂತರಿಸಲಾಯಿತು.