ಡೈಲಿ ವಾರ್ತೆ: 07/ಜುಲೈ /2024
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ: ಧಾರಾಕಾರ ಮಳೆಗೆ ಎಲ್ಲೆಡೆ ಅವಾಂತರಗಳು ಸೃಷ್ಟಿ, ನದಿಗಳು ರೌದ್ರ ಅವತಾರ ತಾಳಿ ಮನೆಗಳಿಗೆ ನುಗ್ಗಿ ಜನ ಜೀವನ ಅಸ್ತವ್ಯಸ್ತ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಧಾರಾಕಾರ ಮಳೆಗೆ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ-ಶಿರಸಿ ರಸ್ತೆಯಲ್ಲಿರುವ ಗುಡ್ಡ ಕುಸಿಯುವ ಹಂತಕ್ಕೆ ತಲುಪಿದೆ. ಇದರಿಂದ ವಾಹನ ಸವಾರರಲ್ಲಿ ಆತಂಕ ಶುರುವಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಗುಡ್ಡ ಹೊಂದಿಕೊಂಡಿದ್ದು, ಕ್ಷಣ ಕ್ಷಣಕ್ಕೂ ಕುಸಿಯುತ್ತಿರುವುದರಿಂದ ಆತಂಕ ಮನೆಮಾಡಿದೆ. ಮಳೆಯ ಅಬ್ಬರ ಮುಂದುವರೆದರೆ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಬೃಹತ ಗಾತ್ರದ ಮಣ್ಣಿನ ಗುಡ್ಡ ಮತ್ತು ಮರಗಳು ಇರುವುದರಿಂದ ಮಿರ್ಜಾನ-ಶಿರಸಿ ರಸ್ತೆಯ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಮೇಲೆ ಮಣ್ಣು ಬಿಳುವ ಸಾಧ್ಯತೆ ಇದೆ.
ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬಿದ್ದ ಮರ: ಸಂಚಾರ ಅಸ್ತವ್ಯಸ್ತ
ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದ ಪರಿಣಾಮ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಮರ ಬಿದ್ದು ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ಘಟನೆ ನಡೆದಿದ್ದು, ಸದ್ಯ ರಸ್ತೆ ಮೇಲೆ ಬಿದ್ದ ಮರ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಲಾಗಿದೆ.
ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃತಕ ಪ್ರವಾಹದಿಂದ 3 ಗ್ರಾಮಗಳ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಈಡೂರು, ಚೆಂಡಿಯಾ, ಚೆಂಡಿಯಾ ಐಸ್ ಫ್ಯಾಕ್ಟರಿಗೆ ಸಂಕಷ್ಟ ಎದುರಾಗಿದ್ದು, ಸೀಬರ್ಡ್ ನೌಕಾ ನೆಲೆಯಿಂದ ಅವೈಜ್ಞಾನಿಕ ಸೇತುವೆ ಕಾಮಗಾರಿಯಿಂದ ನೂರಾರು ಎಕರೆ ಕೃಷಿ ಭೂಮಿ, 40 ಮನೆಗಳಿಗೆ ಜಲದಿಗ್ಬಂಧನ ಮತ್ತು 10ಕ್ಕೂ ಹೆಚ್ಚು ಮನೆ ಜಲಾವೃತವಾಗಿವೆ.
ನಿರಂತರ ಮಳೆಯಿಂದ ಹೊನ್ನಾವರ ತಾಲೂಕಿನ ಕರ್ನಲ್ ಹಿಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿದೆ. ಕಾರವಾರದಿಂದ ಹೊನ್ನಾವರಕ್ಕೆ ಹೋಗುವ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದ್ದು, ಏಕಮುಖ ಸಂಚಾರಕ್ಕೆ ಪೊಲೀಸ್ ಇಲಾಖೆ ಅನುವು ಮಾಡಿಕೊಟ್ಟಿದೆ. ರಸ್ತೆ ಮೇಲೆ ಕುಸಿದಿರುವ ಮಣ್ಣನ್ನು ಐಆರ್ಬಿ ಸಿಬ್ಬಂದಿ ತೆರವು ಮಾಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.