ಡೈಲಿ ವಾರ್ತೆ: 07/ಜುಲೈ /2024

ಗದಗ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿ : ಚಿಕಿತ್ಸೆ ಫಲಿಸದೇ 5 ವರ್ಷದ ಬಾಲಕ ಸಾವು

ಗದಗ: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಗದಗ ಜಿಲ್ಲೆಯಲ್ಲಿ ಡೇಂಜರ್ ಡೆಂಘೀಗೆ 5 ವರ್ಷದ ಬಾಲಕ ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಮೃತ ಬಾಲಕ ಗದಗ ತಾಲೂಕಿನ ಶಿರುಂಜ ಗ್ರಾಮದ ಚಿರಾಯು ಹೊಸಮನಿ (5) ಎಂದು ತಿಳಿದು ಬಂದಿದೆ.

ಕಳೆದ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕ ಚಿರಾಯುನನ್ನು ಗದಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ನಂತರ ಕೆಲ ಗಂಟೆಗಳ ಕಾಲ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿತ್ತು. ತದನಂತರ ಮೃತ ಬಾಲಕನ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್ ಡಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ
ಚಿಕಿತ್ಸೆ ಫಲಿಸದೆ ರವಿವಾರ ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಗದಗ ನಗರದ ಜಿಮ್ಸ್ ನಲ್ಲಿ ಮೂವರು ಮಕ್ಕಳು ಸೇರಿ 12 ಡೆಂಘೀ ಪ್ರಕರಣಗಳ ಇದ್ದು, ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾಹಿತಿ ನೀಡಿದ್ದಾರೆ.