ಡೈಲಿ ವಾರ್ತೆ: 22/ಜುಲೈ /2024
ಯಕ್ಷಗಾನ ಹವ್ಯಾಸಿ ಕಲಾ ತಂಡದ ಮೂಲಕ ಹೊಸ ಕಲಾವಿದರ ಸೃಷ್ಠಿ- ಆನಂದ್ ಸಿ ಕುಂದರ್
ಕೋಟ : ಯಕ್ಷಗಾನ ಕಲೆ ಬೆಳೆಯಬೇಕಾದ್ರೆ ಸಾಕಷ್ಟು ಹವ್ಯಾಸಿ ಕಲಾವಿದರು ಹುಟ್ಟಿಕೊಳ್ಳಬೇಕು. ಇದರಿಂದಾಗಿ ಯಕ್ಷಗಾನ ಕಲೆ ಬೆಳೆಯಲು ಸಾಧ್ಯ ಎಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಅವರು ಹೇಳಿದರು.
ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ನಡೆದ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಯಕ್ಷಸುಮನಸ ಹವ್ಯಾಸಿ ಕಲಾರಂಗ (ರಿ) ಕೋಟ ಇವರ ಸಹಯೋಗದಲ್ಲಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯಕ್ಷಗಾನ ನಮಗೆ ಜ್ಞಾನ ವೃದ್ಧಿ ಜೊತೆಗೆ ಬದುಕಿಗೆ ಬೆಳಕು ಚೆಲ್ಲುವ ನೀತಿಗಳನ್ನು ಸಾರುತ್ತದೆ. ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಮೂಡಿಸುವ ಕೆಲಸವಾಗಬೇಕಿದೆ. ಇಂದು ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನವಿದ್ದು ಈ ಸಂದರ್ಭದಲ್ಲಿ ಸುಮನಸ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ನಮ್ಮನ್ನು ಅಗಲಿದ ಯಕ್ಷಗಾನ ಪ್ರಸಾಧನ ಪ್ರಮುಖರಾದ ದಿ. ಬಾಲಕೃಷ್ಣ ನಾಯಕ್ ಹಂದಾಡಿ, ಯಕ್ಷಗಾನ ಭಾಗವತ ದಿ. ಸುಬ್ರಹ್ಮಣ್ಯ ಧಾರೇಶ್ವರ, ವೈದ್ಯರು ಹಾಗೂ ಗಾಯಕರಾದ ದಿ. ಡಾ. ಸತೀಶ್ ಪೂಜಾರಿ ಇವರಿಗೆ ಇಂದು ನವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಆನಂದ್ ಸಿ ಕುಂದರ್ ಹೇಳಿದರು.
ಯಕ್ಷಗಾನ ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್ ಅವರು ನಮ್ಮನ್ನು ಆಗಲಿದ ದಿವ್ಯ ಚೇತನಗಳಾದ ದಿ. ಬಾಲಕೃಷ್ಣ ನಾಯಕ ಹಂದಾಡಿ, ದಿ. ಸುಬ್ರಹ್ಮಣ್ಯ ಧಾರೇಶ್ವರ, ದಿ. ಡಾ. ಸತೀಶ್ ಪೂಜಾರಿ ಇವರಿಗೆ ನುಡಿ ನಮನ ಸಲ್ಲಿಸಿದರು.
ಚಿತ್ರ ನಟ ರಮೇಶ್ ಅರವಿಂದ್ ಅವರ ಪ್ರಾಯೋಜಿತ ಕಾರಂತ ದತ್ತಿನಿಧಿಯ ಪುರಸ್ಕಾರವನ್ನು ಪ್ರದಾನಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾ. ಪಂ. ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಅಭಿಯಾನ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘ(ರಿ)ಕೋಟದ ಅಧ್ಯಕ್ಷ ಸದಾನಂದ ಜಿ, ಕೋಟ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಪೂಜಾರಿ, ಗುತ್ತಿಗೆದಾರ ಸುರೇಶ್ ಗಾಣಿಗ ಶೇವಧಿ, ಉದ್ಯಮಿ ಕಿರಣ್ ತೆಕ್ಕಟ್ಟೆ, ಬಾಳೆಬೆಟ್ಟು ಫ್ರೆಂಡ್ಸ್ (ರಿ) ಬಾಳೆಬೆಟ್ಟು ಅಧ್ಯಕ್ಷ ರತ್ನಾಕರ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿ, ಯಕ್ಷಸುಮನಸ ಕಲಾರಂಗದ ಅಧ್ಯಕ್ಷ ಪ್ರಸಾದ್ ಬಿಲ್ಲವ ಪ್ರಸ್ತಾಪಿಸಿ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ರವೀಂದ್ರ ರಾವ್ ವಂದಿಸಿದರು.