ಡೈಲಿ ವಾರ್ತೆ: 22/ಜುಲೈ /2024

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಕುಂದಾಪುರ ವಲಯ ವಾರ್ಷಿಕ ಅಧಿವೇಶನ – 101 ನೇ ವಿಪ್ರವಾಣಿ ಸಂಚಿಕೆ ಬಿಡುಗಡೆ

ಕುಂದಾಪುರ: ಬ್ರಾಹ್ಮಣ್ಯ ಮತ್ತು ಬ್ರಾಹ್ಮಣ ಉಳಿದರೆ ರಾಷ್ಟ್ರ ಉಳಿಯುತ್ತದೆ. ಸಂಘಟನೆಯಲ್ಲಿ ಶಕ್ತಿ ಇದೆ. ಬ್ರಾಹ್ಮಣರು ಸಂಘಟಿ ತರಾಗುವುದರಿಂದ ಸಮಷ್ಟಿಯ ಅಭಿವೃದ್ಧಿ ಸಾಧ್ಯ. ಬ್ರಾಹ್ಮಣ ಪರಿಷತ್ತು ಈ ನಿಟ್ಟಿನಲ್ಲಿ ಯಶಸ್ಸಿನ ಹೆಜ್ಜೆ ಇರಿಸಿದೆ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಾಲಯದ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಹೇಳಿದರು.

ಹಂಗಳೂರಿನ ಶ್ರೀ ಕೃಷ್ಣ ಸಭಾ ಭವನದಲ್ಲಿ ನಡೆದ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಕುಂದಾಪುರ ವಲಯದ ಮಹಾಸಭೆಯಲ್ಲಿ ಪರಿಷತ್ತಿನ ಜನಪ್ರಿಯ ಮುಖವಾಣಿ ವಿಪ್ರವಾಣಿಯ 101 ನೇ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಶುಭ ಹಾರೈಸಿದರು.

ತಮ್ಮ ಶಿಸ್ತುಬದ್ಧ ಜೀವನ, ಸಮಾಜಮುಖಿ ಕಳಕಳಿಯ ಮೂಲಕ ಇತರರಿಗೂ ಆದರ್ಶವಾದ, ನಿವೃತ್ತ ಮುಖ್ಯೋಪಾಧ್ಯಾಯ ಉಪ್ಪಿನಕುದ್ರು ವೆಂಕಟರಮಣ ಹೊಳ್ಳರ ಪ್ರಾಯೋಜಕತ್ವದ 101 ನೇ ವಿಪ್ರವಾಣಿ ಸಂಚಿಕೆ ಒಂದು ಸಂಗ್ರಹ ಯೋಗ್ಯ ಕೈಪಿಡಿಯಾಗಿ ಹೊರಬಂದಿದೆ ಎಂದು ಶ್ಲಾಘಿಸಿದ ಅವರು, ಸಂಪಾದಕ ಮಂಡಳಿಯವರನ್ನು ಅಭಿನಂದಿಸಿದರು.

ದ್ರಾವಿಡ ಬ್ರಾಹ್ಮಣ ಪರಿಷತ್ ಕುಂದಾಪುರ ವಲಯಾಧ್ಯಕ್ಷ ಜಿ.ಎಸ್.ಭಟ್ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ಆರಂಭದಲ್ಲಿ ದೀಪ ಬೆಳಗುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ಕೊರಂಗ್ರಪಾಡಿಯ ವಿದ್ವಾನ್ ಕೆ. ಪಿ. ಕುಮಾರ ಗುರು ತಂತ್ರಿಗಳು ಮಾತನಾಡಿ, ಸಮಾಜವನ್ನು ಉಳಿಸುವಲ್ಲಿ ಬ್ರಾಹ್ಮಣ ಸಮುದಾಯ ಮುಂದಾಗಬೇಕು. ಬ್ರಾಹ್ಮಣರು ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕು. ಬ್ರಾಹ್ಮಣ್ಯದಿಂದ ಬ್ರಾಹ್ಮಣ, ಧರ್ಮ ಉಳಿಯುತ್ತದೆ. ಈ ಮೂಲಕ ಧರ್ಮ ರಕ್ಷಣೆ ಮಾಡುವುದರಿಂದ ವಿಶ್ವ ಕಲ್ಯಾಣವಾಗುತ್ತದೆ ಎಂದರು.

ವಿಪ್ರವಾಣಿಯ ಪ್ರಧಾನ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ ಮಾತನಾಡಿ ವಿಪ್ರವಾಣಿ ಬೆಳೆದುಬಂಧ ಬಗೆಯನ್ನು ವಿವರಿಸಿ, ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅಭ್ಯಾಗತರಾಗಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ ಮಂಜ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್, ದ್ರಾವಿಡ ಬ್ರಾಹ್ಮಣ ಪರಿಷತ್, ಕುಂದಾಪುರ ವಲಯ ಗೌರವಾಧ್ಯಕ್ಷ ಚಂದ್ರಶೇಖರ ಐತಾಳ್, ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ತಾಲೂಕು ಯುವ ವೇದಿಕೆ ಅಧ್ಯಕ್ಷ ಮತ್ತು ದ್ರಾವಿಡ ಬ್ರಾಹ್ಮಣ ಪರಿಷತ್, ಕುಂದಾಪುರ ವಲಯ ಕಾರ್ಯದರ್ಶಿ ಯು. ಅವನೀಶ್ ಹೊಳ್ಳ, ತಾಲೂಕು ಮಹಿಳಾ ವೇದಿಕೆ ಕುಂದಾಪುರ ವಲಯ ಕಾರ್ಯದರ್ಶಿ ಜಯಲಕ್ಷ್ಮೀ ಕಾರಂತ, ಕುಂದಾಪುರ ವಲಯ ಖಜಾಂಚಿ ಜಿ. ಎಸ್. ಹೆಗ್ಡೆ ಉಪಸ್ಥಿತರಿದ್ದು ಶುಭ ಹಾರೈಸಿದರು.

ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ರಾವ್ ಕುಂಭಾಶಿ ಮಾತನಾಡಿ, ಮುಂಬರುವ ಸಪ್ಟಂಬರ್ 1ರಂದು ನೀಲಾವರದಲ್ಲಿ ಪರಿಷತ್ ನ ಮಹಿಳಾ ಸಮಾವೇಶ ನಡೆಯುವುದಾಗಿ ಘೋಷಿಸಿದರು. ವಿರವಾಣಿಯ 101 ನೇ ಸಂಚಿಕೆ ಪ್ರಾಯೋಜಕ, ನಿವೃತ್ತ ಮುಖ್ಯೋಪಾಧ್ಯಾಯ ಉಪ್ಪಿನಕುದ್ರು ವೆಂಕಟರಮಣ ಹೊಳ್ಳರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯದರ್ಶಿ ಅವನೀಶ್ ಹೊಳ್ಳ ವರದಿ ಮಂಡಿಸಿದರು. ಖಜಾಂಚಿ ಜಿ. ಎಸ್. ಹೆಗಡೆ ಆಯ – ವ್ಯಯ ವರದಿ ಒಪ್ಪಿಸಿದರು. ಜಯಲಕ್ಷ್ಮೀ ಕಾರಂತ ವಂದಿಸಿದರು. ಯುಕ್ತಾ ಹೊಳ್ಳ, ಅವನೀಶ್ ಹೊಳ್ಳ, ಶಂಕರನಾರಾಯಣ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿಪ್ರ ಕ್ರಿಕೆಟ್ ತಂಡ ಮತ್ತು ವಿಪ್ರ ಮಹಿಳಾ ತ್ರೋಬಾಲ್ ತಂಡದವರನ್ನು ಅಭಿನಂದಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಂದಾಪುರದ ನೇತ್ರ ತಜ್ಞ ಡಾ. ವಿ. ನರಸಿಂಹ ಹೊಳ್ಳ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಸಂಗೀತ ವಿದುಷಿ ನಳಿನಿ ವಿ.ರಾವ್, ಸಮಾಜ ಸೇವಕ ಹೊಳೆಬದಿ ಕೆ. ರಾಮಕೃಷ್ಣ ಕಾರಂತ, ಕ್ರೀಡಾಪಟು ಡಾ. ಸುಚೇತ ಇವರನ್ನು ವಿಶೇಷವಾಗಿ ಅಭಿನಂದಿ ಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಗಲಿದ ಹಿರಿಯ ಚೇತನಗಳಿಗೆ ಸಭಾರಂಭದಲ್ಲಿ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. 2024 26 ನೇ ಸಾಲಿನ ಕುಂದಾಪುರ ವಲಯದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬಾಕ್ಸ್ ಐಟಂ:
8೦ರ ಹರೆಯದರಲ್ಲಿ 2೦ರ ತರುಣನ ಕ್ರೀಯಾಶೀಲತೆ ಹೊಂದಿದ ನಿವೃತ್ತ ಅಧ್ಯಾಪಕ ಉಪ್ಪಿನಕುದ್ರು ವೆಂಕಟರಮಣ ಹೊಳ್ಳರವರ ಕಾರ್ಯಕ್ಷಮತೆ ನಿಜಕ್ಕೂ ಶ್ಲಾಘನೀಯ. ವಿಪ್ರವಾಣಿ ಸಂಚಿಕೆ ಹೊಳ್ಳರ ಪ್ರತಿಭೆಗೆ ಜ್ವಲಂತ ಸಾಕ್ಷಿಯಾಗಿ ನಿಂತಿದೆ. 101ನೇ ಸಂಚಿಕೆ ವೆಂಕಟರಮಣ ಹೊಳ್ಳರವರ 8೦ನೇ ವರ್ಷಕ್ಕೆ ಕೊಡುಗೆಯಾಗಿ ರೂಪುಗೊಂಡಂತಿದೆ. ಅದರ ವಿನ್ಯಾಸ, ಮುದ್ರಣ, ಬರಹ ಮತ್ತು ಭಾವಚಿತ್ರಗಳು ವಿಪ್ರವಾಣಿಯ ಘನತೆಯನ್ನು ಎತ್ತಿ ಹಿಡಿದಿದೆ. ಹೊಳ್ಳರವರ ಅಹರ್ನಿಶಿ ದುಡಿಮೆ ಈ ಸಂಚಿಕೆಯಲ್ಲಿ ಅನಾವರಣಗೊಂಡಿದೆ. ಬಹುದಿನಗಳ ಕನಸೊಂದು ಈಡೇರಿದ ಖುಷಿ ಸಿಕ್ಕಿದೆ. ಒಬ್ಬ ಯೋಗಪಟುವಾಗಿ, ಆದರ್ಶ ಶಿಕ್ಷಕರಾಗಿ ಮತ್ತು ತಂದೆಯಾಗಿ, ಒಬ್ಬ ಸಮಾಜ ಸೇವಕರಾಗಿ ಗುರುತಿಸಿಕೊಂಡ ಹೊಳ್ಳರು ಬಡತನದ ಹೋರಾಟದ ಮೂಲಕ ಬದುಕನ್ನು ಕಟ್ಟಿಕೊಂಡವರು. ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ನಿಟ್ಟಿನಲ್ಲಿ ಅಧ್ಯಾಪಕ ವೃತ್ತಿಯ ಮೂಲಕ ತನ್ನನ್ನು ಸಾಮಾಜಿಕ ಕಾರ್ಯಕ್ಕೆ ಒಗ್ಗೂಡಿಸಿಕೊಂಡರು. ಹನುಮಂತನ ಮಹಾನ್ ದೈವಭಕ್ತರಾಗಿರುವ ವೆಂಕಟರಮಣ ಹೊಳ್ಳರವರಿಗೆ 1೦೦ ವರ್ಷ ಆಯುಷ್ಯ, ಆರೋಗ್ಯ ಲಭಿಸಲಿ. ಇನ್ನು ಹೆಚ್ಚಿನ ಕಾರ್ಯಸಾಧನೆ ಇವರಿಂದಾಗಲಿ. ಶುಭ ಹಾರೈಕೆಗಳು — ಪ್ರೊ. ಶಂಕರ್ ರಾವ್ ಕಾಳಾವರ, ವಿಪ್ರವಾಣಿ ಪ್ರಧಾನ ಸಂಪಾದಕ.