ಡೈಲಿ ವಾರ್ತೆ: 03/ಆಗಸ್ಟ್/2024

ಹರಪನಹಳ್ಳಿ:ವಿದ್ಯಾರ್ಥಿಗಳಿಗೆ ಆರೋಗ್ಯಶಿಕ್ಷಣ ಅಭಿಯಾನ ಕಾರ್ಯಕ್ರಮ – ವಿದ್ಯಾರ್ಥಿಗಳು ದುಶ್ಚಟ ಗಳಿಂದ ದೂರವಿದ್ದು, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ: ಮಲ್ಲಿಕಾರ್ಜುನ

ಹರಪನಹಳ್ಳಿ :- ಹದಿಹರೆಯದವರು ಸಮಾಜದ ಒಂದು ದೊಡ್ಡ ಭಾಗವನ್ನು ಪ್ರತಿನಿಧಿಸುತ್ತಾರೆ ಮತ್ತು ಅವರು ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ಭವಿಷ್ಯವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದ್ದಾರೆ. ಈ ಸಮಯದಲ್ಲಿ ತ್ವರಿತ ದೈಹಿಕ, ಭಾವನಾತ್ಮಕ, ಅರಿವಿನ ಮತ್ತು ಸಾಮಾಜಿಕ ಬೆಳವಣಿಗೆ ಸಂಭವಿಸುತ್ತದೆ. ಹಾಗಾಗಿ ಹದಿಹರೆಯದವರ ಆರೋಗ್ಯದ ಅರಿವು ಮತ್ತು ಯೋಗಕ್ಷೇಮ ಮುಖ್ಯ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕರಾದ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಹೆಚ್.ಪಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಹಯೋಗದೊಂದಿಗೆ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಹದಿಹರೆಯದವರಿಗೆ ಆರೋಗ್ಯಶಿಕ್ಷಣ ಅಭಿಯಾನದಡಿ ಚಟುವಟಿಕೆ ಆಧರಿತ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಹದಿಹರೆದವರಲ್ಲಿ ಉಂಟಾಗುವ ಮಾನಸಿಕ, ದೈಹಿಕ ಬದಲಾವಣೆಗಳು ಮತ್ತು ವೈಯಕ್ತಿಕ ಸ್ವಚ್ಛತೆ, ಕೌಟುಂಬಿಕ ಸ್ವಚ್ಛತೆ ಹಾಗೂ ಸಮುಧಾಯದ ಸ್ವಚ್ಛತೆಯ ಪ್ರಾಮುಖ್ಯತೆ, ಜೀವನದ ಗುರಿ, ಉದ್ದೇಶ ಮತ್ತು ಅದನ್ನು ತಲುಪುವಲ್ಲಿ ಶಿಕ್ಷಕರ ಮಾರ್ಗದರ್ಶನ, ಹದಿಹರೆಯದವರಲ್ಲಿನ ಸಂವೇಗಾತ್ಮಕ ಸಮಸ್ಯೆಗಳು ಮತ್ತು ಅವುಗಳಿಂದ ಹೊರಬರುವ ಮಾರ್ಗಗಳು, ಕಲಿಕೆ ಮತ್ತು ಗೊಂದಲ ಹಾಗೂ ಅವುಗಳ ನಿರ್ವಹಣೆಯ ಬಗ್ಗೆ ಸಂವಾದ ಮುಂತಾದ ಚಟುವಟಿಕೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಥೆ ಹೇಳುವುದು, ಗುಂಪು ಚರ್ಚೆ ನಡೆಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಹಾಗೂ ಡ್ರಾಯಿಂಗ್‌ಶೀಟ್‌ಗಳಲ್ಲಿ ಮಕ್ಕಳ ಜೀವನದ ಗುರಿ ಮತ್ತು ಉದ್ದೇಶಗಳನ್ನು ಬರೆಸಿ ಚರ್ಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಅಗತ್ಯವೆಂದು ತಿಳಿಸಿದರು. ಈ ವಯಸ್ಸಿನ ವಿದ್ಯಾರ್ಥಿಗಳು ದುಶ್ಚಟ ಗಳಿಂದ ದೂರವಿದ್ದು ಗುರುಹಿರಿಯರ ಮಾರ್ಗದರ್ಶನ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಆಪ್ತ ಸಮಾಲೋಚಕ ಮಲ್ಲಿಕಾರ್ಜುನ ಹಾಗೂ ಸಂತೋಷ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹೆಚ್.ಪಿ.ಎಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ.ಸಿ.ಬೆನಕನಕೊಂಡ, ಎನ್.ಎಸ್.ಎಸ್ ಸಂಯೋಜನಾಧಿಕಾರಿಯಾದ ಮಂಜುನಾಥ್ ಮಾಳ್ಗಿ, ಆರೋಗ್ಯ ಇಲಾಖೆಯ ಸಂತೋಷ್ ಕುಮಾರ್, ಹಿರಿಯ ಉಪನ್ಯಾಸಕರಾದ ಸಿ.ಎಸ್.ಬಸವರಾಜಪ್ಪ, ಕೆ.ಬಿ ರವೀಂದ್ರ, ಕೆ.ಟಿ.ವೆಂಕಟೇಶ್, ಸುಧಾ.ಬಿ.ಒ, ಪ್ರದೀಪ್ ಡಿಸಿ, ಶಂಕರಪ್ಪ, ಅರುಣ್, ವೀರಣ್ಣ ಗುರುಬಸವರಾಜ್, ಅವಿನಾಶ್, ಎಸ್.ಡಿ.ಎ ನಾಗರಾಜ್, ಪ್ರೀತಿ, ಎಲ್.ಹನುಮಂತ, ಗೌರಮ್ಮ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.