ಡೈಲಿ ವಾರ್ತೆ: 10/ಆಗಸ್ಟ್/2024

ಬ್ರೆಜಿಲ್‌ನಲ್ಲಿ ಭೀಕರ ವಿಮಾನ ಪತನ – 62 ಮಂದಿ ಸಾವು!

ಬ್ರೆಜಿಲ್​​ನಲ್ಲಿ ಭಾರಿ ವಿಮಾನ ಅಪಘಾತ ಸಂಭವಿಸಿದ್ದು ಅದರಲ್ಲಿದ್ದ 62 ಜನರೆಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಏರ್​​ಲೈನ್​ ವೊಪಾಸ್​ ಲಿನ್ಹಾಸ್​ ಏರಿಯಾಸ್​ ನಿರ್ವಹಿಸುತ್ತಿದ್ದ ATR-72 ಟರ್ಬೊಪ್ರೊಪ್​ ವಿಮಾನವು ಪರಾನಾ ರಾಜ್ಯದ ಕ್ಯಾಸ್ಕಾವೆಲ್​ನಿಂದ ಸಾವೊ ಪಾಲೊದಲ್ಲಿನ ಗೌರುಲ್ಹೋಸ್​ಗೆ ತೆರಳುತ್ತಿತ್ತು. ಆದರೆ, ಮಾರ್ಗ ಮಧ್ಯೆ ಸಾವೊ ಪಾಲೊ ನಗರದ ಜನವಸತಿ ಪ್ರದೇಶದಲ್ಲೇ ಪತನಗೊಂಡಿದೆ. ಅದರಲ್ಲಿದ್ದ 62 ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಸಾವೊ ಪಾಲೊದ ರಾಜ್ಯ ಅಗ್ನಿಶಾಮಕ ದಳದ ಏಳು ತಂಡ ತೆರಳಿ ಬೆಂಕಿ ನಂದಿಸಿದೆ. 58 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ದು ಸಾವೊ ಪಾಲೊದ ಗೌರುಲ್ಹೋಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ. ಎಂದು ಏರಲೈನ್​ ವೊಪಾಸ್​ ತಿಳಿಸಿದೆ. ಆದರೆ, ಅಪಘಾತಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

ಸಮೀಪದ ಕಾಂಡೋಮಿನಿಯಂ ಕಾಂಪ್ಲೆಕ್ಸ್‌ನಲ್ಲಿರುವ ಒಂದು ಮನೆಗೆ ಮಾತ್ರ ಹಾನಿಯಾಗಿದೆ. ನಿವಾಸಿಗಳಿಗೆ ಯಾವುದೆ ಗಾಯವಾಗಿಲ್ಲ. ವಿಮಾನ ಅಪಘಾತದ ದೃಶ್ಯ ಸ್ಥಳೀಯರ ಮೊಬೈಲ್​ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಮಾನವು ಆಕಾಶದಲ್ಲಿ ತಿರುಗುತ್ತ ನೆಲಕ್ಕೆ ಅಪ್ಪಳಿಸಿದೆ. ವಿಮಾನ ಭೂಮಿಗೆ ಬಿದ್ದ ಕೂಡಲೆ ಹೊತ್ತಿ ಉರಿದಿದೆ.