ಶಿವಮೊಗ್ಗ: ಸಾಕಿದ ಬೆಕ್ಕು ಕಚ್ಚಿ ಮಹಿಳೆ ಸಾವು – ಬೆಕ್ಕು ಪರಚಿದರೆ ಹುಷಾರ್

ಶಿವಮೊಗ್ಗ: ಸಾಕಿದ ಬೆಕ್ಕೊಂದು ಮನೆಯೊಡತಿಯನ್ನೇ ಬಲಿ ಪಡೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ.

ಮೃತ ಮಹಿಳೆ ಗಂಗೀಬಾಯಿ (50) ಎಂದು ತಿಳಿದು ಬಂದಿದೆ. ತಾನೇ ಸಾಕಿದ ಬೆಕ್ಕು ಮಹಿಳೆ ಕಾಲಿಗೆ ಕಚ್ಚಿತ್ತು. ಈಕೆ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದು ಸುಮ್ಮನಾಗಿದ್ದರು. ನಂತರದ ಇಂಜೆಕ್ಷನ್‌ಗಳನ್ನು ಪಡೆಯಲು ವೈದ್ಯರಲ್ಲಿಗೆ ತೆರಳಿರಲಿಲ್ಲ.

ಹಲವು ದಿನಗಳ ಹಿಂದೆ ಬೆಕ್ಕು ಕಚ್ಚಿದ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಶುರುವಾಗಿತ್ತು. ರೇಬೀಸ್‌ ಹಬ್ಬಿದ್ದು, ದೇಹದಲ್ಲಿ ನಂಜು ಏರುತ್ತಲೇ ಹೋಗಿತ್ತು. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆಯಲ್ಲಿ ಮಹಿಳೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯು ನಿನ್ನೆ ಮೃತಪಟ್ಟಿದ್ದಾರೆ.

ಇದೇ ಬೆಕ್ಕು ಮೊದಲು ತರಲಘಟ್ಟದ ಕ್ಯಾಂಪ್​ನಲ್ಲಿರುವ ಯುವಕನೋರ್ವನ ಮೇಲೆ ದಾಳಿ ಮಾಡಿತ್ತು. ಎರಡು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಕಚ್ಚಿತ್ತು. ಯಜಮಾನಿಯನ್ನು ಕಚ್ಚುವ ಮುನ್ನ ನಾಯಿಯ ಮರಿಯನ್ನೂ ಕಚ್ಚಿತ್ತು. ಯುವಕನ ಕಾಲಿಗೆ ಔಷಧ ಮಾಡಿ ನಂಜು ತೆಗೆಸಲಾಗಿತ್ತು. ಪರಿಣಾಮ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಘಟನೆಯ ಬಗ್ಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಟಿ.ಡಿ ತಿಮ್ಮಪ್ಪ ಪ್ರತಿಕ್ರಿಯಿಸಿದ್ದು, ನಾಯಿಯು ಬೆಕ್ಕಿಗೆ ಕಚ್ಚಿರಬೇಕು. ನಾಯಿಯ ರೇಬಿಸ್ ಮಹಿಳೆಗೆ ಕಚ್ಚಿದ ಬೆಕ್ಕಿಗೆ ಬಂದಿದೆ. ಅದೇ ಬೆಕ್ಕು ಮಹಿಳೆಗೆ ಕಚ್ಚಿದೆ. ಇದರಿಂದ ಮಹಿಳೆಯು ಮೃತಪಟ್ಟಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ನಾಯಿಯು ಈ ಬೆಕ್ಕಿಗೆ ಕಚ್ಚಿದ್ದರಿಂದ ರೇಬಿಸ್ ಹರಡಿದ್ದು, ಬಳಿಕ ಬೆಕ್ಕು ಮನೆ ಒಡತಿಗೆ ಕಚ್ಚಿದೆ. ಹೀಗಾಗಿ ಮಹಿಳೆ ರೇಬಿಸ್​ನಿಂದ ಮೃತಪಟ್ಟಿದ್ದಾಳೆಂದು ಶಂಕಿಸಲಾಗಿದೆ.

ಇಲ್ಲಿ ಮಹಿಳೆಯು ಒಂದೇ ಇಂಜೆಕ್ಷನ್ ಪಡೆದು ಬಳಿಕ ನಿರ್ಲಕ್ಷ್ಯ ಮಾಡಿದ್ದಾಳೆ. ಗುಣಮುಖ ಆಗಿದೆ ಎಂದು ಭಾವಿಸಿ ನಾಟಿ ಮಾಡಲು ಹೋಗಿದ್ದಾರೆ. ನೀರಿಗೆ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ರೇಬಿಸ್​ನಿಂದಾಗಿ ಅನಾರೋಗ್ಯ ಕಾಡಿದ ಪರಿಣಾಮ ಮತ್ತೆ ಗಂಗೀಬಾಯಿ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವಿಗೀಡಾಗಿದ್ದಾರೆ.

ಬೆಕ್ಕು, ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದರೆ ರೇಬೀಸ್‌ ಇಂಜೆಕ್ಷನ್‌ ಪಡೆದುಕೊಳ್ಳಬೇಕು. ಬಾವಲಿ ಮುಂತಾದ ಪಕ್ಷಿಗಳ ಪರಚಿದರೆ, ಕಚ್ಚಿದರೆ ಕೂಡ ಎಚ್ಚರಿಕೆ ವಗಹಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ.