ಡೈಲಿ ವಾರ್ತೆ: 11/ಆಗಸ್ಟ್/2024
ಬೆಳ್ಳಂಬೆಳಗ್ಗೆ ಮಂಡ್ಯದಲ್ಲಿ ಪೊಲೀಸರಿಂದ ಗುಂಡಿನ ದಾಳಿ – ರೌಡಿಶೀಟರ್ ಕಾಲಿಗೆ ಗುಂಡೇಟು!
ಮಂಡ್ಯ: ಪೊಲೀಸ್ ಕಾರ್ಯಾಚರಣೆ ವೇಳೆ ರೌಡಿಶೀಟರ್ ಕಾಲಿಗೆ ಫೈರಿಂಗ್ ಮಾಡಿ ನಟೋರಿಯಸ್ ರೌಡಿಶೀಟರ್ ನನ್ನ ಬಂಧಿಸಿರುವ ಘಟನೆ ಭಾನುವಾರ (ಆ.11) ಬೆಳ್ಳಂಬೆಳಗ್ಗೆ ನಡೆದಿದೆ.
ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಬಳಿ ರೌಡಿಶೀಟರ್ ಮುತ್ತುರಾಜ್ ಅಲಿಯಾಸ್ ಡಕ್ಕನ ಮೇಲೆ ಹಲಗೂರು ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಕೊಲೆ, ಕೊಲೆಯತ್ನ ಹಾಗೂ ರೌಡಿ ಚಟುವಟಿಕೆಗಳು ಸೇರಿದಂತೆ ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮುತ್ತುರಾಜ್ ಅಲಿಯಾಸ್ ಡಕ್ಕನನ್ನು ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳ್ಳಂಬೆಳಗ್ಗೆ ಬಂಧಿಸಲು ಹೋದಾಗ ಪೊಲೀಸ್ ಸಿಬ್ಬಂದಿ ಸಿದ್ದರಾಜು ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ.
ಮೊದಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ, ಆದರೂ ಸಹ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಆರೋಪಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 30 ರಂದು ಕಾಂತರಾಜು ಎಂಬಾತನ ಕೊಲೆ ನಡೆದಿತ್ತು. ಆ ಸಂಬಂಧ ಕೊಲೆ ಪ್ರಕರಣ ದಾಖಲಾಗಿತ್ತು. ಸಿಪಿವೈ ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಆರಂಭಿಸಿದ್ದರು. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿತ್ತು.
ತನಿಖೆ ವೇಳೆ ಕಾಂತರಾಜು ಕೊಲೆಗೆ ಮುತ್ತುರಾಜ ಅಲಿಯಾಸ್ ಡಕ್ಕ ಸುಪಾರಿ ನೀಡಿರುವ ಬಗ್ಗೆ ಆರೋಪಿಗಳು ಬಾಯ್ದಿಟ್ಟಿದ್ದರು. ಡಕ್ಕ ಅಲಿಯಾಸ್ ಮುತ್ತುರಾಜ್ ಸೂಚನೆ ಮೇಲೆ ಕೊಲೆ ನಡೆಸಿರುವುದಾಗಿ ಆರೋಪಿಗಳ ತಪ್ಪೊಪ್ಪಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಈತನ ಬಂಧನಕ್ಕೆ ಪೊಲೀಸರು ಶೋಧ ಕೈಗೊಂಡಿದ್ದರು
ಮುತ್ತುರಾಜ್ ಅಲಿಯಾಸ್ ಡಕ್ಕ 11 ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
3 ಕೊಲೆ, 3 ಕೊಲೆಗೆ ಯತ್ನ, 2 ರಾಬರಿ ಪ್ರಕರಣ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನಷ್ಟು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿ ಡಕ್ಕ ಹಲವು ಹುಡುಗರ ಗುಂಪು ಕಟ್ಟಿಕೊಂಡು ಅಪರಾಧ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. 2019 ರಿಂದ ರೌಡಿ ಚಟುವಟಿಕೆಯಲ್ಲಿದ್ದು ಇಸ್ವೀಟ್ ಜೂಜಾಟ ದಂಧೆಗೂ ಇಳಿದಿದ್ದನು. ಇದೀಗ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.