ಡೈಲಿ ವಾರ್ತೆ: 17/ಆಗಸ್ಟ್/2024

ಕುಂದಾಪುರ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ವರಮಹಾಲಕ್ಷ್ಮೀ ಪೂಜೆಯ ಸಂಭ್ರಮ ಆಚರಣೆ

ಕುಂದಾಪುರ: ಎಕ್ಸಲೆಂಟ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್ ಅಂಗಳದ ವಿದ್ಯಾಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಬಹಳ ಸಂಭ್ರಮ-ಸಡಗರದಿಂದ ಆಚರಿಸಲಾಯಿತು .

ಶುಕ್ರವಾರ ಬೆಳಗಿನ ಶುಭ ಮುಹೂರ್ತದಲ್ಲಿ ಮೊದಲ ಪೂಜಿತನಾದ ಗಣಪತಿಯ ಗಣಹೋಮದೊಂದಿಗೆ ವಿದ್ವಾಂಸರಾದ ಶ್ರಿ ಗಣೇಶ ಭಟ್ಟರ ನೇತೃತ್ವದಲ್ಲಿ ಆರಂಭಗೊಂಡು ನಂತರ ಸಾಂಗವಾಗಿ ಶ್ರೀವರಮಹಾಲಕ್ಷ್ಮೀಯ ಮಹಾಪೂಜೆಯನ್ನು ವಿದ್ಯಾರ್ಥಿ-ಉಪನ್ಯಾಸಕರ ಭಜನೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ವಿದ್ವಾನ್ ಶ್ರೀಗಣೇಶಭಟ್ ಅವರ ನೇತೃತ್ವದಲ್ಲಿ ನಡೆದ ಈ ವರಮಹಾಲಕ್ಷ್ಮೀ ಮಹಾಪೂಜೆಯು ಈ ವಿದ್ಯಾಮಂದಿರದ ವಿದ್ಯಾಕೇಂದ್ರದಲ್ಲಿ ಶ್ರೀವಿದ್ಯಾಲಕ್ಷ್ಮೀಯ ಸರ್ವ ಅಲಂಕಾರದೊಂದಿಗೆ ಪುರೋಹಿತರ ಮಂತ್ರಘೋ಼ಷಗಳೊಂದಿಗೆ ಶಾಸ್ತ್ರ ಬದ್ಧವಾಗಿ ಪ್ರಾರಂಭವಾಯಿತು.

ಈ ಸುಸಂದರ್ಭದಲ್ಲಿ ಸಂಸ್ಕೃತ ವಿದ್ವಾನರಾದ ಶ್ರೀ ಗಣೇಶಭಟ್ಟರು ವಿದ್ಯಾರ್ಥಿಗಳಿಗೆ ಈ ಪೂಜೆಯ ಮಹತ್ವವನ್ನು ಕಥೆಯ ಮೂಲಕ ಪ್ರಚುರಪಡಿಸುತ್ತಾ, ವಿಜ್ಞಾನಕ್ಕಿಂತಲೂ ಈ ನಮ್ಮ ಸನಾತನ ಧರ್ಮದ ಸಂಸ್ಕೃತಿಯೂ ಮಿಗಿಲಾಗಿದ್ದು ,ವಿಜ್ಞಾನವೂ ಕಂದಂತಹ “ಪ್ರಣಾಳ ಶಿಶು”ವಿನ ಸಂಶೋಧನೆಯು ಮಹಾಭಾರತದ ಯುಗದಲ್ಲಿ ಕೌರವರ ಸೃಷ್ಟಿಯಕಾಲದಲ್ಲಿ ಆಗಿದೆ ಎನ್ನುವ ಸುಂದರ ನಿದರ್ಶನಗಳೊಂದಿಗೆ ಸನಾತನ ಧರ್ಮದ ಮಹತ್ವ ಹಾಗೂ ಶ್ರೀವರಮಹಾಲಕ್ಷ್ಮೀ ಹಬ್ಬದ ಮಹತ್ವದ ಬಗ್ಗೆ ತಿಳಿಸಿದರು .

ಈ ಸುಂದರ ದೇವತಾ ಕಾರ್ಯಕ್ರಮದಲ್ಲಿ ಎಂ.ಎಂ.ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ ನ ಅಧ್ಯಕ್ಷರಾದ ಎಂ.ಮಹೇಶ್‌ಹೆಗ್ಡೆಯವರು ಎಲ್ಲಾ ಪೂಜಾವಿಧಿಗಳಲ್ಲಿ ಸಂಸಾರ ಸಮೇತರಾಗಿ ಭಾಗವಹಿಸಿ ಅದನ್ನು ಚಂದಗಾಣಿಸಿಕೊಟ್ಟರು . ಇವರ ಜೊತೆಗೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಹಾಗೂ ಹೈಸ್ಕೂಲಿನ ಮುಖ್ಯಶಿಕ್ಷಕಿಯಾದ ಸರೋಜಿನಿ ಆಚಾರ್ಯ ಅವರು ಉಪಸ್ಥಿತರಿದ್ದರು. ಈ ಸುಂದರ ದೇವತಾಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಕಾಲೇಜಿನ ಸರ್ವ ಉಪನ್ಯಾಸಕರು, ಸಹಶಿಕ್ಷಕರು ,ವಿದ್ಯಾರ್ಥಿ ವೃಂದದವರು, ಬೋಧಕೇತರ ಸಿಬ್ಬಂಧಿಗಳು ಸಹ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಬಹಳ ಶೃದ್ಧಾಭಕ್ತಿಯಿಂದ ಶ್ರೀವರಮಹಾಲಕ್ಷ್ಮೀ ಪೂಜೆಯನ್ನು ಸಡಗರದಿಂದ ಆಚರಿಸಿದರು .