ಡೈಲಿ ವಾರ್ತೆ: 20/ಆಗಸ್ಟ್/2024
ಮಂಗಳೂರು: 500 ರೂ. ಮುಖಬೆಲೆಯ ಖೋಟಾ ನೋಟು ಮುದ್ರಿಸಿ ಚಲಾವಣೆಗೆ ಯತ್ನ- ನಾಲ್ವರು ಆರೋಪಿಗಳ ಬಂಧನ
ಮಂಗಳೂರು: 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಮಂಗಳೂರು ನಗರದಲ್ಲಿ ಚಲಾವಣೆಗೆ ಯತ್ನಿಸುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕೇರಳದ ಕಾಸರಗೋಡು ಜಿಲ್ಲೆಯ ಕೊಳತ್ತೂರಿನ ವಿ.ಪ್ರಿಯೇಶ್ (38), ಕಾಸರಗೋಡು ಜಿಲ್ಲೆಯ ಮಲ್ಲ ಗ್ರಾಮದ ಮುಳಿಯಾರಿನ ವಿನೋದ್ ಕುಮಾರ್ ಕೆ. (33), ಪೆರಿಯಾದ ಕುನಿಯಾ ವಡಂಕುರದ ಅಬ್ದುಲ್ ಖಾದರ್ ಎಸ್.ಎ. (58) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಬೆಳಿಯೂರು ಕಟ್ಟೆಯ ಆಯ್ಯೂಬ್ ಖಾನ್ (51) ಎಂದು ತಿಳಿದು ಬಂದಿದೆ.
ಬಂಧಿತರಿಂದ 2.13 ಲಕ್ಷ ರೂ. ಮೌಲ್ಯದ 427 ಖೋಟಾ ನೋಟುಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಇವರು ಕಾಸರಗೋಡಿನಲ್ಲಿ ಯೂಟ್ಯೂಬ್ ನೋಡಿ ಕಲಿತು ನಕಲಿ ನೋಟುಗಳನ್ನು ಮುದ್ರಿಸಿ ತಂದು ಮಂಗಳೂರು ನಗರದ ಕ್ಲಾಕ್ ಟವರ್ ವೃತ್ತದ ಬಳಿಯ ಲಾಡ್ಜ್ ಒಂದರಲ್ಲಿದ್ದು ಚಲಾವಣೆಗೆ ಯತ್ನಿಸುತ್ತಿದ್ದಾಗ ಸೆರೆಯಾಗಿದ್ದಾರೆ. ಎಷ್ಟು ಮೊತ್ತದ ನಕಲಿ ನೋಟು ಚಲಾವಣೆ ಆಗಿದೆ ಮತ್ತು ಎಷ್ಟು ಸಮಯದಿಂದ ಮೋಸದ ಕೃತ್ಯ ನಡೆಯುತ್ತಿದೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
ಸಾಲದ ಸುಳಿಗೆ ಸಿಲುಕಿದ್ದ ಪ್ರಿಯೇಶ್ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್‌ನಿಂದ ಕಲಿತು ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಮುದ್ರಣಾಲಯದಲ್ಲಿ ಖೋಟಾ ನೋಟುಗಳನ್ನು ಮುದ್ರಿಸುತ್ತಿದ್ದ. ಕಚ್ಚಾ ಸಾಮಗ್ರಿಗಳನ್ನು ಕೇರಳದ ಕೋಝಿಕ್ಕೋಡ್ ಮತ್ತು ದೆಹಲಿಯಿಂದ ಖರೀದಿಸಿ ತರುತ್ತಿದ್ದ. ಸುಲಭದಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ನಾಲ್ಕು ತಿಂಗಳಿನಿಂದ ಈ ಕೃತ್ಯದಲ್ಲಿ ತೊಡಗಿದ್ದ. ಆತನಿಗೆ ವಿನೋದ್ ಪರಿಚಯವಿತ್ತು. ವಿನೋದ್ ಮೂಲಕ ಅಬ್ದುಲ್ ಖಾದರ್, ಅಯ್ಯೂಬ್ ಖಾನ್ ಪರಿಚಯವಾಗಿದ್ದರು. ಆಯ್ಯೂಬ್ ಖಾನ್ ಖಾನ್ ಖೋಟಾ ನೋಟುಗಳನ್ನು ಪ್ರಿಯೇಶ್‌ನಿಂದ ತರಿಸಿಕೊಂಡು ಮಂಗಳೂರು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರು. ಪ್ರಿಯೇಶ್ ₹ 25 ಸಾವಿರ ಪಡೆದು, ಪ್ರತಿಯಾಗಿ ₹ 500 ಮುಖ ಬೆಲೆಯ ಒಂದು ಲಕ್ಷ ಮೌಲ್ಯದ ಖೋಟಾ ನೋಟು ನೀಡಲು ಒಪ್ಪಿದ್ದ. ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.