ಡೈಲಿ ವಾರ್ತೆ: 08/Sep/2024

ತರಳಬಾಳು ಜಗದ್ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಚಾರ್ಯ ಮಹಾಸ್ವಾಮಿಗಳ ಸಮಾಜಮುಖಿಯಾದ ಸೇವೆ ಹಾಗೂ ಅವರ ಬಸವತತ್ವ ಆದರ್ಶ ಚಿಂತನೆಗಳು ನಮಗೆ ಪ್ರೇರಣೆ : ನಿವೃತ್ತ ಪ್ರಾಚಾರ್ಯರಾದ ಪ್ರಭುಲಿಂಗಪ್ಪ ಸಿ ಹಲಗೆರೆ

ಹರಪನಹಳ್ಳಿ :- ಸಮಾಜದಲ್ಲಿನ ಅಧರ್ಮ, ಅನ್ಯಾಯ, ಸ್ವೇಚ್ಛೆಚಾರ ಮೇರೆ ಮಿರಿದಾಗ ಸಂಜೀವಿನಿಯ ಹಾಗೆ ಸಾಧು,ಸಂತರು, ದಾರ್ಶನಿಕರು, ಯೋಗಿಗಳು, ಸಜ್ಜನರು, ಮಹಾತ್ಮರು ಜನ್ಮ ತಾಳಿ ನೊಂದವರ ಬದುಕಿಗೆ ದಾರಪದೀಪವಾಗುತ್ತಾರೆ ಅಂತಹ ಕಾರಣೀಪುರುಷರ ಸಾಲಿನಲ್ಲಿ ನಿಲ್ಲುವವರು ಎಂದರೆ ಕಲಿಯುಗದ ವರಗುರುವೆಂದೇ ಆರಾಧಿಸಲ್ಪಡುವ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ 20ನೇ ಗುರುವರ್ಯರಾದ ಶ್ರೀ ಶಿವಕುಮಾರ ಶಿವಚಾರ್ಯ ಮಹಾಸ್ವಾಮಿಗಳು ಎಂದು ನಿವೃತ್ತ ಪ್ರಾಚಾರ್ಯರಾದ ಪ್ರಭುಲಿಂಗಪ್ಪ ಸಿ ಹಲಗೆರೆಯವರು ಶ್ರೀಗಳ ಬಸವತತ್ವ ಆದರ್ಶ ಚಿಂತನೆಗಳನ್ನ ಸ್ಮರಿಸಿಕೊಂಡಾಡಿದರು.

ಪಟ್ಟಣದ ಹೆಚ್.ಪಿ.ಎಸ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶ್ರೀ ಮದುಜ್ಜಯಿನಿ ಸದ್ದರ್ಮ ಸಿಂಹಾಸನದೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಚಾರ್ಯ ಮಹಾಸ್ವಾಮಿಗಳವರ 32ನೇಯ ಶ್ರದ್ದಾಂಜಲಿ ಸಮಾರಂಭದ ಪ್ರಯುಕ್ತ ಪ್ರಾದೇಶಿಕ ಹಂತದ ಸಾಂಸ್ಕೃತಿಕ ಸ್ಫರ್ದೆಗಳು ಹಾಗೂ 2024-25ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳು, ರಾಷ್ಟ್ರೀಯ ಸೇವಾಯೋಜನೆ ಘಟಕದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ತಮ್ಮವಿಶೇಷ ಉಪನ್ಯಾಸದಲ್ಲಿ ಮಾತನಾಡಿ ಶಿವಕುಮಾರ ಶಿವಚಾರ್ಯ ಮಹಾಸ್ವಾಮಿಗಳವರು ತಮ್ಮ ಜೀವಿತದ ಅವಧಿಯಲ್ಲಿಯೇ ಜನಮಾನಸದಲ್ಲಿಯೇ ದಂತಕಥೆಯಾದವರು ಎಂದರು.

ಶ್ರೀಗಳು ಕೇವಲ ನುಡಿಜಾಣರಾಗದೇ ನಡೆಧೀರರು ಆಗಿದ್ದ
ಅಪ್ರತಿಮ ವೀರಸನ್ಯಾಸಿಯಾಗಿ ಹಳ್ಳಿಗಾಡಿನ ಜನರಿಗೆ ಶಿಕ್ಷಣದ ನೀರೆರೆದು ಬದುಕಿನ ಬೆಂಗಾಡುನಲ್ಲೂ ಸುಖದ ನಂದನವನವನ್ನು ನಿರ್ಮಿಸಿದವರು. ಅಂಜದೇ ಅಳುಕದೇ ಪರಮಾತ್ಮನ ರಾಜತೇಜದಲ್ಲಿ ಬಾಳಿ ಬಸವ ತತ್ವದ ಹಿನ್ನೆಲೆಯಲ್ಲಿ ಸಮಾಜವನ್ನು ಮುನ್ನಡೆಸಿದರು ಎಂದು ತಿಳಿಸಿದರು.

ಅವರು ಆಸೀನರಾದದ್ದು ಬೆಳ್ಳಿ ಬಂಗಾರ ಸಿಂಹಾಸನದ ಮೇಲಲ್ಲ, ಭಕ್ತರ ಹೃದಯ ಅವರಿಗೆ ಸಿಂಹಾಸನವಾಗಿತ್ತು. ತರಳಬಾಳು ಪೀಠವನ್ನು ಕೇವಲ ಧಾರ್ಮಿಕ ಕ್ಷೇತ್ರವನ್ನಾಗಿಸದೇ ಸಮಾಜಮುಖಿಯನ್ನಾಗಿ ಮಾಡಿದರು. ಕಾಯಕ ಮತ್ತು ಕಾಲದ ಮಹತ್ವ ಸಾರಿ ಅನ್ನ, ಅಕ್ಷರ, ಆಶ್ರಯದ ಮೂಲಕ ಜಾತ್ಯಾತೀತ ಸಮಾಜದ ಕನಸು ಕಂಡು ನನಸನ್ನಾಗಿಸಿದರು. ನಾಡಿನಾದ್ಯಂತ ವಿವಿಧ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ, ಪ್ರಸಾದ ನಿಲಯಗಳನ್ನು ತೆರೆದು, ಅಣ್ಣನ ಬಳಗ, ಅಕ್ಕನ ಬಳಗ, ತರಳಬಾಳು ಕಲಾಸಂಘ, ತರಳಬಾಳು ಪ್ರಕಾಶನ ಹೀಗೇ ಹಲವಾರು ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಶಿವಾನುಭವ ಪ್ರವಾಸ, ಜಾತಿ-ಧರ್ಮ ಮೀರಿ ಸರ್ವಶರಣರ ಸಮ್ಮೇಳನಗಳನ್ನು ಸಂಘಟಿಸುತ್ತಿದ್ದರು ಹಾಗೆಯೇ ಸಂಸ್ಕೃತ ಪಾಂಡಿತ್ಯಗಳಿಸಿ ಕವಿ, ಲೇಖಕರು, ವಿಮರ್ಶಕರು, ನಾಟಕ ರಚನಾಕಾರರು, ನಿರ್ದೇಶಕರು, ಉತ್ತಮ ವಾಗ್ಮೀಗಳೂ, ವಿದ್ವಾಂಸರಾಗಿ ಸಮಾಜಕ್ಕೆ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ರಾಷ್ಟ್ರೀಯ ಸೇವಾ ಯೋಜನೆ (ಎನ್‌.ಎಸ್‌.ಎಸ್) ನಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ಸಮಾಜಕ್ಕೆ ಹತ್ತಿರ ತರುವ ದೃಷ್ಟಿಯಿಂದ ರಾಷ್ಟ್ರಮಟ್ಟದಲ್ಲಿ ರೂಪಿಸಲಾದ ಒಂದು ಶ್ರೇಷ್ಠ ಶೈಕ್ಷಣಿಕ ವಿಸ್ತರಣಾ ಕಾರ್ಯಕ್ರಮವಾಗಿದೆ. ಇದು ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಶೈಕ್ಷಣಿಕ ಕಾರ್ಯಕ್ರಮವಾಗಿದೆ ಎಂದರು.

ಸಾಧು ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಗುಂಡಗತ್ತಿ ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಿರಿಗೆರೆ ಬೃಹನ್ಮಠದ ಲಿಂ. ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾಜದ ಎಲ್ಲರ ಏಳಿಗೆಗಾಗಿ ತಮ್ಮ ಜೀವನವನ್ನೇ ಧಾರೆ ಎರೆದಿದ್ದರು. ಅಂಥ ಗುರುಗಳನ್ನು ಪಡೆದ ನಾವೆಲ್ಲರೂ ಧನ್ಯರು ಎಂದು ಹೇಳಿದರು.

ಸಮಾಜದಲ್ಲಿನ ಬಹುತೇಕ ಜನರು ಅಂದಿನ ದಿನಗಳಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದುದನ್ನು ಮನಗಂಡ ಶಿವಕುಮಾರ ಮಹಾಸ್ವಾಮಿಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಎಲ್ಲರಿಗೂ ಸುಲಭವಾಗಿ ಶಿಕ್ಷಣ ಸೌಲಭ್ಯ ದೊರೆಯುವಂತೆ ಮಾಡಿದರು. ಆ ಮೂಲಕ ಸಮಾಜದ ಎಲ್ಲರೂ ತಮ್ಮ ಬದುಕು ಕಟ್ಟಿಕೊಳ್ಳಲು ಅವಶ್ಯಕವಾದ ವೇದಿಕೆ ನಿರ್ಮಿಸಿದರು ಎಂದು ತಿಳಿಸಿದರು.
           
ಹೆಚ್.ಪಿ.ಎಸ್ ಪಿಯು ಕಾಲೇಜಿನ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಪಿ.ಮಹಾಬಲೇಶ್ವರ ಗೌಡ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ
ಸಮಾಜದಲ್ಲಿ ಹಾಸೊಹೊಕ್ಕಾಗಿದ್ದ ಮೌಢ್ಯಗಳ ನಿವಾರಣೆಗೆ ಶ್ರಮಿಸಿರುವ ಕೆಲವೇ ಮಠಗಳಲ್ಲಿ ಸಿರಿಗೆರೆಯ ತರಳಬಾಳು ಮಠ ಪ್ರಮುಖವಾದುದು. ಮಠದ ಸಮಾಜಮುಖಿ ಕೆಲಸಗಳಿಗೆ ಭದ್ರ ಬುನಾದಿ ಹಾಕಿದ ಕೀರ್ತಿ 20ನೇ ಗುರು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದರು.

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಸಿರಿಗೆರೆಯಲ್ಲಿ ಶಾಲಾ ಕಾಲೇಜುಗಳು ಮತ್ತು ಉಚಿತ ವಿದ್ಯಾರ್ಥಿ ನಿಲಯಗಳಲ್ಲಿ ಸಹಪಂಕ್ತಿ ಭೋಜನ ಆರಂಭಿಸುವ ಮೂಲಕ ಅಸ್ಪೃಶ್ಯತೆ ನಿವಾರಣೆ ಹಾಗೂ ಜಾತ್ಯತೀತತೆಯ ಅರಿವು ಮೂಡಿಸಿದ್ದರು.

1962ರಲ್ಲಿ ಹುಟ್ಟುಹಾಕಿದ ತರಳಬಾಳು ವಿದ್ಯಾಸಂಸ್ಥೆಯು ಇಂದು ಮಧ್ಯ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ, ಶಿಶುವಿಹಾರದಿಂದ ಮೊದಲ್ಗೊಂಡು ಎಂಜಿನಿಯರಿಂಗ್ ಕಾಲೇಜುಗಳವರೆಗೆ 274 ಶಾಲೆ-ಕಾಲೇಜು-ಹಾಸ್ಟೆಲ್‍ಗಳನ್ನು ನಡೆಸುತ್ತಿದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಸಂಸ್ಥೆಯ ಆಶ್ರಯದಲ್ಲಿ ಇಂದು 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆಯಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಾಸವಾಗುವುದರ ಜೊತೆಗೆ ನಾಯಕತ್ವ ಗುಣ ಬೆಳವಣಿಗೆಯಾಗುತ್ತದೆ.ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ಮುಖ್ಯ ವೇದಿಕೆಯಾಗುತ್ತದೆ ಎಂದು ಹೇಳಿದರು.

ಪ್ರಾಸ್ಥಾವಿಕವಾಗಿ ಎಸ್.ಟಿ.ಜೆ ಸಂಸ್ಥೆಯ ಹರಪನಹಳ್ಳಿ ವಲಯ ಅಧಿಕಾರಿಯಾದ ಸಿ.ಎಸ್ ಬಸವರಾಜ್ ಮಾತನಾಡಿದರೆ, ಮುಖ್ಯ ಅತಿಥಿಗಳಾಗಿ ಎಸ್.ಟಿ.ಜೆ ಕೇಂದ್ರ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಸಿ.ಸಿದ್ದಪ್ಪ ಮಾತನಾಡಿದರು. ಹೆಚ್.ಪಿ.ಎಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಸಿ ಬೆನಕನಕೊಂಡ ಇವರು ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಆಗಮಿಸಿದ ತೀರ್ಪುಗಾರರಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಂತಸಪಟ್ಟು ಎಲ್ಲರಿಗೂ ಕೃತಜ್ಞತೆಯನ್ನ ತಿಳಿಸಿದರು.

ಇದೇ ವೇಳೆ ಪ್ರಾದೇಶಿಕ ಹಂತದ ಸಾಂಸ್ಕೃತಿಕ ಸ್ಫರ್ದೆಗಳಲ್ಲಿ ಹರಪನಹಳ್ಳಿಯ ಹೆಚ್.ಪಿ.ಎಸ್ ಪದವಿ ಪೂರ್ವ ಕಾಲೇಜ್, ಎಸ್.ಟಿ.ಜೆ ಪಾಲಿಟೆಕ್ನಿಕ್ ಕಾಲೇಜ್, ಹೆಚ್.ಪಿ.ಎಸ್ ಪದವಿ ಕಾಲೇಜ್, ರಾಣೆಬೆನ್ನೂರಿನ ಹೊಸಮನಿ ಸಿದ್ದಪ್ಪ ಪಿಯು ಕಾಲೇಜ್, ಸದ್ಗುಗುರು ಶಿವಾನಂದ ಸಂಯುಕ್ತ ಪಿಯು ಕಾಲೇಜ್ ಸುಣಕಲ್ ಬಿದರಿ, ಐ.ಜಿ ಹಿರೇಗೌಡ್ರು ಪಿಯು ಕಾಲೇಜ ಉಣಕಲ್ ಭಾಗವಹಿಸಿದ್ದವು. ಈ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ಹೆಚ್.ಪಿ.ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು
ವಚನ ನೃತ್ಯ, ಜನಪದ ನೃತ್ಯ, ಕಿರುನಾಟಕ, ಏಕಪಾತ್ರ ಅಭಿನಯ, ರಸಪ್ರಶ್ನೆ, ಕನ್ನಡ ಸುಂದರ ಬರವಣಿಗೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರೆ, ಚಿತ್ರಕಲೆಯಲ್ಲಿ ದ್ವಿತೀಯ, ಸುಂದರ ಬರಣಿಗೆ ಇಂಗ್ಲೀಷ್ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಕೋರ್ಡಿನೇಟರ್ ಆಗಿ ಟಿ.ಮಹೇಶ್, ತೀರ್ಪುಗಾರರಾಗಿ ಎಸ್.ಅನಿತ, ಟಿ.ಬಿ.ದಿವ್ಯ, ರೇವಣ್ಣ ನಾಯ್ಕ್, ಸಿ.ಅಜ್ಜಯ್ಯ, ಕೆ.ಪ್ರಕಾಶಪ್ಪ, ನೀಲಪ್ಪ, ಕೆ.ಎಸ್. ಪ್ರಸನ್ನ, ಎಂ.ಬಿ ರೂಪಾ, ಶರತ್, ಶೀಲಾ, ವಾಹಿದಾ ಬೇಗಂ, ಎಸ್.ಆರ್. ವೀರೇಶ್ ಬಾಗವಹಿಸಿ ನ್ಯಾಯಸಮ್ಮತವಾದ ತೀರ್ಪನ್ನ ನೀಡಿದ್ದಾರೆ.

ಈ ಸಂದರ್ಭದಲ್ಲಿ ಎಸ್.ಟಿ.ಜೆ ಪಾಲಿಟೆಕ್ನಿಕ್ ಸ್ಥ.ಸ.ಸ ಅಧ್ಯಕ್ಷರಾದ ಕೆ.ಜಿ ಶಿವಯೋಗಿ, ಹೆಚ್.ಪಿ.ಎಸ್ ಪದವಿ ಕಾಲೇಜಿನ ಸ್ಥ.ಸ.ಸ ಅಧ್ಯಕ್ಷರಾದ ಬಿ.ರೇವನಗೌಡ್ರು, ಪ್ರಾಚಾರ್ಯರಾದ ಡಾ.ಮುತ್ತೇಶ್, ನಿರ್ದೇಶಕರಾದ ಉದಯಕುಮಾರ್, ಹೆಚ್.ಪಿ.ಎಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ.ಸಿ.ಬೆನಕನಕೊಂಡ, ಹಿರಿಯ ಉಪನ್ಯಾಸಕರಾದ ಸಿ.ಎಸ್ ಬಸವರಾಜ್, ರವೀಂದ್ರ ಕೆ.ಬಿ, ಸುಧಾ ಬಿ.ಒ, ಪ್ರದೀಪ್ ಡಿ.ಸಿ, ಅಜ್ಜಯ್ಯ, ಎನ್.ಎಸ್.ಎಸ್ ಅಧಿಕಾರಿಯಾದ ಮಂಜುನಾಥ್.ಮಾಳ್ಗಿ, ಶಂಕ್ರಪ್ಪ, ವೀರಣ್ಣ, ಚೈತ್ರ, ಮರುಳಪ್ಪ, ಮಹಾಂತೇಶ್, ಗುರುಬಸವರಾಜ್, ಅವಿನಾಶ್, ಆಫೀಸ್ ಅಧೀಕ್ಷಕರಾದ ಪ್ರೀತಿ, ನಾಗರಾಜ್, ಅಟೆಂಡರ್ ಮಾರುತಿ, ಚಿನ್ನಸ್ವಾಮಿ ಸೇರಿದಂತೆ ವಿವಿಧ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.