ಡೈಲಿ ವಾರ್ತೆ: 16/Sep/2024

ಕೊಡಾಜೆ : ಈದ್ ಮಿಲಾದ್ ಮೆರವಣಿಗೆಯಲ್ಲಿ ಸಿಹಿ ವಿತರಿಸಿ ಸಾಮರಸ್ಯದ ಸಂದೇಶ ಸಾರಿದ ಭಾವೈಕ್ಯ ವೇದಿಕೆಯ ಹಿಂದೂ ಸಹೋದರರು

ಬಂಟ್ವಾಳ : ಕೋಮು ಪ್ರಚೋದನಕಾರಿ ಭಾಷಣ, ಹೇಳಿಕೆಗಳ ಮೂಲಕ ಭಾರತದ ಜಾತ್ಯಾತೀತ ಪರಂಪರೆಗೆ ಮಸಿ ಬಳಿಯುವ ಕಾರ್ಯ ಒಂದೆಡೆಯಾದರೆ, ಬಂಟ್ವಾಳ ತಾಲೂಕಿನ ಹೃದಯ ಭಾಗ ಬಿ.ಸಿ.ರೋಡಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಜನರು ಆತಂಕದಲ್ಲಿದ್ದರೂ ಇದಕ್ಕೆ ವ್ಯತಿರಿಕ್ತವಾಗಿ ಮಿಲಾದ್ ಮೆರವಣಿಗೆಯಲ್ಲಿ ಹಿಂದೂ ಬಾಂಧವರು ಸಿಹಿ ತಿಂಡಿ ವಿತರಿಸಿ ಸಾಮರಸ್ಯದ ಸಂದೇಶ ಸಾರುವ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಮಾಣಿ ಮತ್ತು ನೆಟ್ಲಮುಡ್ನೂರು ಗ್ರಾಮದ ಕೊಡಾಜೆಯಲ್ಲಿ ಸೋಮವಾರ ನಡೆಯಿತು.

ಕೊಡಾಜೆ ಬದ್ರಿಯಾ ಜುಮಾ ಮಸೀದಿ, ತರ್ಬಿಯತುಲ್ ಇಸ್ಲಾಂ ಮದ್ರಸ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಕೊಡಾಜೆಯ ಭಾವೈಕ್ಯ ವೇದಿಕೆಯ ಹಿಂದೂ ಸಹೋದರರು ಸಿಹಿ ತಿಂಡಿ ಹಂಚುವ ಮೂಲಕ ರಾಷ್ಟ್ರದ ಸಾಮರಸ್ಯ, ಸೌಹಾರ್ದತೆಯ ಬದುಕಿಗೆ ಪ್ರೇರಣೆ ನೀಡುವ ಮೂಲಕ ವ್ಯಾಪಕ ಪ್ರಶಂಸೆಗೆ ಪಾತ್ರರಾದರು.

ಇದೇ ಪರಿಸರದಲ್ಲಿ ಇತ್ತೀಚೆಗೆ ನಡೆದ ಗಣೇಶೋತ್ಸವ ಸಂದರ್ಭದಲ್ಲಿ ಅನಂತಾಡಿ ಕರಿಂಕದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ನೇರಳಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಶ್ರೀ ಗಣೇಶನ ಶೋಭಾಯಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳಿಗೆ ಕೊಡಾಜೆ ಐಕ್ಯ ವೇದಿಕೆಯ ಮುಸ್ಲಿಂ ಯುವಕರು ಐಸ್ ಕ್ರೀಮ್ ಹಾಗೂ ನೀರು ವಿತರಿಸಿ ಈ ಭಾಗದ ಸೌಹಾರ್ದತೆಗೆ ನಾಂದಿ ಹಾಡುವ ಮೂಲಕ ಜನಮನ್ನನೆ ಗಳಿಸಿದ್ದರು. ಇದೀಗ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ, ಭಾವೈಕ್ಯ ವೇದಿಕೆಯ ಹಿಂದೂ ಬಾಂಧವರಿಗೆ ಮತ್ತು ಕೊಡಾಜೆ ಪರಿಸರದ ಸರ್ವ ಧರ್ಮೀಯ ಬಾಂಧವರಿಗೆ ಸಿಹಿತಿಂಡಿ ಹಾಗೂ ಪಾನೀಯ ವಿತರಿಸುವ ಮೂಲಕ ನಾಡಿನ ಸಾಮರಸ್ಯ ಬದುಕಿಗೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಕೊಡಾಜೆ ಭಾವೈಕ್ಯ ವೇದಿಕೆಯ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ , ಬಾಲಕೃಷ್ಣ ಆಳ್ವ ಕೊಡಾಜೆ, ಸತೀಶ್ ಪೂಜಾರಿ ಕೊಪ್ಪರಿಗೆ, ಲಯನ್ ಡಾ. ಎ.ಮನೋಹರ ರೈ ಹಾಗೂ ಶೀತಲ್ ಗಣೇಶ ನಗರ ಮಾತನಾಡಿ ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಅನುಸರಿಸುವುದರ ಜೊತೆಗೆ ಸಹೋದರ ಧರ್ಮವನ್ನು ಗೌರವಿಸುವ ಮೂಲಕ ಶಾಂತಿ, ಸಾಮರಸ್ಯ, ಸೌಹಾರ್ದತೆಯ, ಜಾತ್ಯಾತೀತ ಭವ್ಯ ಭಾರತದ ನಿರ್ಮಾಣ ಸಾಧ್ಯ, ಇಂತಹ ಕಾರ್ಯಕ್ರಮಗಳು ರಾಷ್ರದೆಲ್ಲಡೆ ನಡೆಯುವ ಮೂಲಕ ಸಹಬಾಳ್ವೆಯ ಬದುಕು ನಮ್ಮೆಲ್ಲರದ್ದಾಗಲಿ ಎಂದು ಅಭಿಪ್ರಾಯಪಟ್ಟರು.

ಭಾವೈಕ್ಯ ವೇದಿಕೆಯ ವಿಕೇಶ್ ಶೆಟ್ಟಿ, ನಿರಂಜನ್ ರೈ, ಮೋಹನ್ ಕರಿಂಕ, ರವಿಚಂದ್ರ ಬಾಬನಕಟ್ಟೆ, ಪ್ರವೀಣ್ ಕರಿಂಕ, ಸತೀಶ್ ಪೂಜಾರಿ ಬಾಯಿಲ, ಶರತ್ ಆಚಾರ್ಯ ಗಣೇಶ ನಗರ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ ರಾಜ್ ಕಮಲ್, ಕಾರ್ಯದರ್ಶಿ ನವಾಝ್ ಭಗವಂತ ಕೋಡಿ, ಕೋಶಾಧಿಕಾರಿ ರಫೀಕ್ ಹಾಜಿ ಸುಲ್ತಾನ್, ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ, ಸದರ್ ಪಿ.ಎ.ಝಕರಿಯ ಅಸ್ಲಮಿ ಮರ್ದಾಳ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ ಕೆ.ಮಾಣಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ, ತರ್ಬಿಯತುಲ್ ಇಸ್ಲಾಂ ಮದ್ರಸ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಹೀಂ ಸುಲ್ತಾನ್, ಕಾರ್ಯದರ್ಶಿ ಇಂಜಿನಿಯರ್ ಲತೀಫ್ ಕೊಡಾಜೆ, ಕೋಶಾಧಿಕಾರಿ ನಝೀರ್ ಕೆಂಪು ಗುಡ್ಡೆ, ಕೊಡಾಜೆ ಐಕ್ಯ ವೇದಿಕೆಯ ಸದಸ್ಯರು ಹಾಗೂ ಪರಿಸರದ ಹಿಂದು – ಮುಸ್ಲಿಂ ಸಮುದಾಯದ ಬಾಂದವರು, ಭಾಗವಹಿಸಿದ್ದರು.