ಡೈಲಿ ವಾರ್ತೆ: 28/Sep/2024

ವರದಿ : ವಿದ್ಯಾಧರ ಮೊರಬಾ

ಶಿರೂರು ಗುಡ್ಡ ಕುಸಿತ ಪ್ರಕರಣ:
ಶ್ರೀ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಡಿಸಿ ಗೆ ಮನವಿ


ಅಂಕೋಲಾ : ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಕಾರವಾರ ಜಿಲ್ಲಾಧಿಕಾರಿಗಳಿಂದ ಹಿಡಿದು ಬೆಂಗಳೂರು, ದೆಹಲಿಯವರೆಗೂ ತೆರಳಿ ಹೋರಾಟ ಮಾಡಿದ್ದಾರೆ. ಹಾಗೇ ಸೆಪ್ಟೆಂಬರ್ 11 ರಂದು ಎನ್‌ಎಚ್‌ಎಐ ಕಚೇರಿಯಿರುವ ಹೊನ್ನಾವರದಲ್ಲಿ ಪ್ರಣವಾನಂದ ಸ್ವಾಮೀಜಿ ಯವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೂ ಕೂಡ ಪೊಲೀಸರು ಅನಗತ್ಯ ದೂರು ದಾಖಲಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಲಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ದಾಮೋದರ ಜಿ. ನಾಯ್ಕ ಹೇಳಿದರು.

ಕಾನೂನಿನ ರೀತಿಯ ಹೋರಾಟಗಳಿಗೆ ಚೌಕಟ್ಟಿನಲ್ಲಿ ಪೊಲೀಸ್ ಇಲಾಖೆಗೂ ಲಿಖಿತವಾಗಿ ತಿಳಿಸಲಾಗಿತ್ತು. ಆದರೆ ಎಲ್ಲಿಯೂ ಕೂಡ ಹೋರಾಟಗಾರರು ಸಣ್ಣ ತಪ್ಪು ಆಗದಂತೆ ನೋಡಿಕೊಂಡಿದ್ದಾರೆ. ಆದರೂ ಕೂಡ ಪ್ರಣವಾನಂದ ಸ್ವಾಮೀಜಿ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಯುವ ಘಟಕದ ರಾಜ್ಯಾಧ್ಯಕ್ಷ ಸಚಿನ ನಾಯ್ಕ ಹೊನ್ನಾವರ, ಜನಪರ ಹೋರಾಟಗಾರ ನಾಗೇಶ ನಾಯ್ಕ ಕಾಗಾಲ ಸೇರಿ 8 ಜನರ ಮೇಲೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ ವಾಗಿದೆ.
ಹೀಗಾಗಿ ತಾವು ತಕ್ಷಣ ಈ ಪ್ರಕರಣವನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಮುಂದೆ ನಡೆಯಲಿರುವ ಹೋರಾಟದಲ್ಲಿ ನಾವು ಕೂಡ ಭಾಗವಹಿಸಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡದಂತೆ ತಾವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಅವರು ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ದಾಮೋದರ ಜಿ. ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಇಲ್ಲಿಯವರೆಗೆ ನಾಪತ್ತೆಯಾದ ವ್ಯಕ್ತಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡ ಬೇಕು. ಬಾಂಡ್ ಮೂಲಕವಾದರೂ ಕೂಡ ಅವರಿಗೆ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿ ಸಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಎಲ್ಲ ರೀತಿಯ ಹೋರಾಟಗಳಲ್ಲಿಯೂ ನಾವು ಬೆಂಬಲ ನೀಡ ಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣ , ಉಪಾಧ್ಯಕ್ಷರಾದ ರಮೇಶ ಎಸ್. ನಾಯ್ಕ, ರಮೇಶ ಎನ್. ನಾಯ್ಕ, ಶ್ರೀಪಾದ ಟಿ. ನಾಯ್ಕ, ಉಮೇಶ ಎನ್. ನಾಯ್ಕ ವಿನಂತಿಸಿದ್ದಾರೆ. ತಹಸೀಲ್ದಾರ ಅನಂತ ಶಂಕರ ಮನವಿ ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವುದಾಗಿ ಹೇಳಿದರು.