ಡೈಲಿ ವಾರ್ತೆ: 29/Sep/2024

ನಕಲಿ ಚಿನ್ನ, ನಕಲಿ ರೈಡ್​ಗೆ ಅಸಲಿ ಪೊಲೀಸರೇ ಸಾಥ್ ನೀಡಿರುವ ಶಂಕೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದ ಕಿರಾತಕರ ತಂಡವೊಂದು, ಜೆಸಿಬಿಯಿಂದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬಂಗಾರ ಸಿಕ್ಕಿದೆ, ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೂಲದ ನವೀನ್‌ಪ್ರದೀಪ್ ಹಾಗೂ ತಂಡವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ರಂಗನಹಳ್ಳಿ ಕ್ರಾಸ್ ಬಳಿ ಕರೆಸಿದ್ದಾರೆ. ಅಲ್ಲಿಗೆ ಬಂದ ಶ್ಯಾಮ್, ರಾಜು ಹಾಗೂ ಮತ್ತೊಬ್ಬರಿಗೆ ಅಸಲಿ ಬಂಗಾರದ ಶ್ಯಾಂಪಲ್ ತೋರಿಸಿ, ನಂತರ ನಕಲಿ ಚಿನ್ನದ ಚೀಲಕೊಟ್ಟು ಪರೀಕ್ಷಿಸಿಕೊಳ್ಳುವಂತೆ ಹೇಳಿದ್ದಾರೆ. ಅಷ್ಟೊತ್ತಿಗೆ ನಕಲಿ ಪೊಲೀಸ್ ರೈಡ್ ಆಗಿದೆ.

ಪೊಲೀಸರಿಂದ ನಕಲಿ ರೈಡ್: ಇನ್ನು ನವೀನ್‌ಪ್ರದೀಪ್ ಹಾಗೂ ತಂಡ ಚಿನ್ನದ ಚೀಲವನ್ನು ತೆಗೆದುಕೊಂಡು ಪರೀಕ್ಷಿಸುತ್ತಿದ್ದಾಗ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ತಾವುಗಳು ಪೊಲೀಸ್ ಎಂದು ಪರಿಚಯಿಸಿಕೊಂಡು ಅವರ ಮೇಲೆ ದಾಳಿ ಮಾಡಿ, ನವೀನ್‌ಪ್ರದೀಪ್ ಬಳಿ ಇದ್ದ 4 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

ಪ್ರಕರಣದ ಹಿಂದೆ ಅಸಲಿ ಪೊಲೀಸರ ಕೈವಾಡದ ಶಂಕೆ:
ಇನ್ನು ದೂರುದಾರ ನವೀನ್‌ಪ್ರದೀಪ್ ಬಳಿ ಹಣ ಕಿತ್ತುಕೊಂಡು ಎಸ್ಕೇಪ್ ಆದವರನ್ನು ಬಿಟ್ಟು, ಹಣ ತೆಗೆದುಕೊಂಡು ಬಂದವರನ್ನು ಠಾಣೆಗೆ ಕರೆತಂದ ಚೇಳೂರು ಠಾಣೆ ಪೊಲೀಸರು, ಅವರಿಂದ ದೂರು ತೆಗೆದುಕೊಂಡಿದ್ದಾರೆ. ಆದರೆ, ನಕಲಿ ಪೊಲೀಸ್ ರೈಡ್ ಹಿಂದೆ ಮೂವರು ಅಸಲಿ ಪೊಲೀಸರ ಕೈವಾಡದ ಶಂಕೆ ವ್ಯಕ್ತವಾಗಿದೆ. ಚೇಳೂರು ಹಾಗೂ ಬಾಗೇಪಲ್ಲಿ ಠಾಣೆಗೆ ಸೇರಿದ ಮೂವರು ಪೊಲೀಸ್ ಸಿಬ್ಬಂದಿಗಳೇ ಆರೋಪಿಗಳ ಜೊತೆ ಶಾಮೀಲಾಗಿ ಕೃತ್ಯ ನಡೆಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಇದರಿಂದ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕು.