ಡೈಲಿ ವಾರ್ತೆ: 04/OCT/2024
ಮಹಾರಾಷ್ಟ್ರ ಸಚಿವಾಲಯದ 3ನೇ ಮಹಡಿಯಿಂದ ಜಿಗಿದ ಡೆಪ್ಯೂಟಿ ಸ್ಪೀಕರ್!
ಮುಂಬೈ: ಮಹಾರಾಷ್ಟ್ರದಲ್ಲಿ ಉಪಸಭಾಪತಿ ಜೊತೆ 7 ಮಂದಿ ಶಾಸಕರು ಇಂದು ಸಚಿವಾಲಯ ಮೂರನೇ ಮಹಡಿಯಿಂದ ಜಿಗಿದ ಆಘಾತಕಾರಿ ಘಟನೆ ನಡೆದಿದೆ.
ಧನಗರ್ ಸಮುದಾಯಕ್ಕೆ ಮೀಸಲಾತಿ ಪರಿಶಿಷ್ಟ ಪಂಗಡದಲ್ಲಿ (ST) ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದನ್ನು ವಿರೋಧಿಸಿ ಆಡಳಿತ ಮತ್ತು ಪ್ರತಿಪಕ್ಷದ 7-8 ಮಂದಿ ಶಾಸಕರು ಮೂರನೇ ಮಹಡಿಯಿಂದ ಜಿಗಿದು ಪ್ರತಿಭಟಿಸಿದ್ದಾರೆ. ಈ ನಾಯಕರು ನೇರವಾಗಿ ಅಳವಡಿಸಲಾಗಿದ್ದ ಬಲೆಗೆ ಬಿದ್ದ ಕಾರಣ ಪಾರಾಗಿದ್ದಾರೆ.
ಮಂತ್ರಾಲಯದಿಂದ ಕೆಳಗಡೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ 2018ರಲ್ಲಿ ಇಲ್ಲಿ ದೊಡ್ಡ ನೆಟ್ ಅಳವಡಿಸಲಾಗಿತ್ತು. ಹೀಗಾಗಿ ಮೇಲಿನಿಂದ ಬಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಹರಸಾಹಸ ಪಟ್ಟು ಸದಸ್ಯರನ್ನು ರಕ್ಷಿಸಿದ್ದಾರೆ.
ಮೇಲಿನಿಂದ ಜಿಗಿದ ಡೆಪ್ಯೂಟಿ ಸ್ಪೀಕರ್ ಜಿರ್ವಾಲ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಅಜಿತ್ ಪವಾರ್ ಬಣದ ಸದಸ್ಯರಾಗಿದ್ದಾರೆ.
ಗುರುವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಸೇರಿದಂತೆ ಇತರರಿದ್ದ ಸಂಪುಟ ಸಭೆಯಲ್ಲಿ ಕೆಲವು ಬುಡಕಟ್ಟು ಶಾಸಕರು ಮಂತ್ರಾಲಯ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ಪ್ರಸ್ತುತ ಇತರೆ ಹಿಂದುಳಿದ ವರ್ಗದಲ್ಲಿ (ಒಬಿಸಿ) ಧನಗರ್ ಸಮುದಾಯವಿದ್ದು ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಕೆಲವು ಸದಸ್ಯರು ಸೊಲ್ಲಾಪುರ ಜಿಲ್ಲೆಯ ಪಂಢರಪುರದಲ್ಲಿ ಧರಣಿ ನಡೆಸುತ್ತಿದ್ದಾರೆ. ಹಲವಾರು ರಾಜ್ಯಗಳಲ್ಲಿ ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲೂ ನಮ್ಮನ್ನು ಎಸ್‌ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ.