ಡೈಲಿ ವಾರ್ತೆ: 06/OCT/2024
ಖಾಸಗಿ ಬಸ್ಸಿಗೆ ‘ಇಸ್ರೇಲ್’ ಹೆಸರು – ಆಕ್ಷೇಪದ ಬಳಿಕ “ಜೆರುಸಲೇಂ” ಹೆಸರಿಟ್ಟ ಬಸ್ ಮಾಲೀಕ
ಮಂಗಳೂರು: ಮೂಲ್ಕಿ-ಮೂಡುಬಿದಿರೆ ನಡುವೆ ಸಂಚರಿಸುವ ಖಾಸಗಿ ಬಸ್ಸೊಂದಕ್ಕೆ “ಇಸ್ರೇಲ್ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಹೆಸರನ್ನೇ ಬದಲಾಯಿಸಲಾಗಿದೆ.
ಇಸ್ರೇಲ್‌ನಲ್ಲಿ ಸುಮಾರು 12 ವರ್ಷಗಳಿಂದ ಉದ್ಯೋಗದಲ್ಲಿರುವ ಮೂಲತಃ ಕಟೀಲಿನವರಾದ ಲೆಸ್ಟರ್ ಕಟೀಲು ಅವರು ಮಂಗಳೂರಿನಲ್ಲಿ ಬಸ್ ಖರೀದಿಸಿ ಅದಕ್ಕೆ “ಇಸ್ರೇಲ್ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದರು. ಬಸ್‌ನ ವ್ಯವಹಾರವನ್ನು ಅವರ ಕುಟುಂಬಸ್ಥರು ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕೆಲವರು “ಇಸ್ರೇಲ್ ಟ್ರಾವೆಲ್ಸ್’ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.
ಇದು ಪೊಲೀಸರ ಗಮನಕ್ಕೂ ಬಂದಿತ್ತು. ಇದರಿಂದ ಮುಂದೆ ದ್ವೇಷ ಹರಡುವುದು ಬೇಡವೆಂಬ ಕಾರಣಕ್ಕೆ ಪೊಲೀಸರು ಬಸ್‌ನ ಮಾಲಕರಿಗೆ ಹೆಸರು ಬದಲಾಯಿಸಲು ಸೂಚನೆ ನೀಡಿದ್ದರು. ಹಾಗಾಗಿ ಲೆಸ್ಟರ್ ಅವರು ಈಗ ಬಸ್ಸಿಗೆ “ಜೆರುಸಲೇಂ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೆಸ್ಟರ್, “ಇಸ್ರೇಲ್‌ನಲ್ಲಿ ಕೆಲಸ ಮಾಡಿದ ಹಾಗೂ ಆ ದೇಶದ ವ್ಯವಸ್ಥೆಯನ್ನು ನೋಡಿ ಅಭಿಮಾನದಿಂದ ಬಸ್ಸಿಗೆ ಇಸ್ರೇಲ್ ಹೆಸರಿಟ್ಟಿದ್ದೆ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರಿಂದ ಬೇಸರವಾಗಿ ಈಗ ಹೆಸರು ಬದಲಿಸಿದ್ದೇನೆ. ಜೆರುಸಲೇಂ ಪವಿತ್ರ ಭೂಮಿ. ಅದೂ ಇಸ್ರೇಲ್‌ನಲ್ಲಿದೆ ಎಂದಿದ್ದಾರೆ.