ಡೈಲಿ ವಾರ್ತೆ: 14/OCT/2024
ಪುಂಜಾಲಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಮಹಿಳೆ ಸಾವು
ಪುಂಜಾಲಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದು ಆಳದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಅ. 14 ರಂದು ಸೋಮವಾರ ಮುಂಜಾನೆ ಬಿಸಿರೋಡು- ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಸಂಭವಿಸಿದೆ.
ಮೃತಪಟ್ಟ ಮಹಿಳೆ ಕೊಡಿಯಾಲ್ ಬೈಲು ನಿವಾಸಿ ಭಾಗೀರಥಿ (58) ಎಂದು ಗುರುತಿಸಲಾಗಿದೆ.
ಇನ್ನು ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ರೂಪೇಶ್ (40)ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೂಪೇಶ್ ಅವರ ಪತ್ನಿ ಸುಚಿತ್ರಾ (33) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪುಂಜಾಲಕಟ್ಟೆ ಕಡೆಯಿಂದ ಬರುತ್ತಿದ್ದ ಚಾವರ್ ಲೆಟ್ ಸ್ಪಾರ್ಕ್ ಕಾರು ಮುಂಜಾನೆ ಸುಮಾರು 4.30 ಗಂಟೆಗೆ ಬಾಂಬಿಲ ಮಸೀದಿ ಮುಂಭಾಗದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿ ಬಿದ್ದಿದೆ.
ಮೂಲತಃ ಮಂಗಳೂರು ಕೊಡಿಯಾಲ್ ಬೈಲು ನಿವಾಸಿಯಾದ ಪಿಡಬ್ಲೂಡಿ ಇಂಜಿನಿಯರ್ ಗೋಪಾಲ ಅವರ ಸಹೋದರಿ ಭಾಗೀರಥಿ ಅವರ ಪುತ್ರಿ ಸುಚಿತ್ರಾ ಮತ್ತು ಅಳಿಯ ರೂಪೇಶ್ ಜತೆ ಪ್ರಯಾಣಿಸುತ್ತಿದ್ದರು. ರೂಪೇಶ್ ಅವರು ತುಮಕೂರು ಜಿಲ್ಲೆಯವರಾಗಿದ್ದು, ಭಾಗೀರಥಿ ಅವರು ದಸರಾ ರಜೆಯಲ್ಲಿ ಅಳಿಯ ಮಗಳ ಜೊತೆ ತುಮಕೂರಿಗೆ ಹೋಗಿ ವಾಪಾಸು ಮಂಗಳೂರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.