ಡೈಲಿ ವಾರ್ತೆ: 18/OCT/2024
ಅ. 19 ರಂದು (ನಾಳೆ) ಕಾರಂತರ ಸಂಸ್ಮರಣೆ ಹಾಗೂ
ಗೆಳೆಯರ ಬಳಗ “ಕಾರಂತ ಪುರಸ್ಕಾರ” ಸಮಾರಂಭ
ಕೋಟ: ಡಾ. ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ ವತಿಯಿಂದ ಅ. 19ರಂದು ಶನಿವಾರ ಸಂಜೆ 6:30 ಕ್ಕೆ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕಾರಂತರ ಸಂಸ್ಮರಣೆ ಹಾಗೂ ಗೆಳೆಯರ ಬಳಗ “ಕಾರಂತ ಪುರಸ್ಕಾರ” ಸಮಾರಂಭ ನಡೆಯಲಿದೆ ಎಂದು ಗೆಳೆಯರ ಬಳಗದ ಅಧ್ಯಕ್ಷರಾದ ಕೆ. ತಾರಾನಾಥ ಹೊಳ್ಳ ಹೇಳಿದರು.
ಅವರು ಅ. 17 ರಂದು ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ, ಪ್ರತಿ ವರ್ಷವೂ ನೀಡುತ್ತಾ ಬಂದಿರುವ ಗೆಳೆಯರ ಬಳಗ ಕಾರಂತ ಪುರಸ್ಕಾರ – 2024 ಪ್ರಶಸ್ತಿಗೆ ಈ ನಾಡಿನ ಹಿರಿಯ ಸಾಹಿತಿ, ಸಂಘಟಕ, ಕವಿ , ಕಾದಂಬರಿಕಾರ, ಸಾಂಸ್ಕೃತಿಕ ಚಿಂತಕ, ಡಾ. ನಾ. ಮೊಗಸಾಲೆ ಅವರು ಭಾಜನರಾಗಿದ್ದಾರೆ.
ಈ ಹಿಂದೆ ಶ್ರೀಮತಿ ಮಾಲಿನಿ ಮಲ್ಯ, ಶ್ರೀ ಎಸ್. ನಾರಾಯಣ ರಾವ್, ಪೇತ್ರಿ ಮಾಧವ ನಾಯಕ್,ಶ್ರೀ ಶ್ರೀನಿವಾಸ ಸಾಸ್ತಾನ,ಶ್ರೀ ಹಿರಿಯಡ್ಕ ಗೋಪಾಲರಾವ್, ಶ್ರೀ ಎಚ್. ಇಬ್ರಾಹಿಂ ಸಾಹೇಬ್, ಶ್ರೀ ಪಾಂಡೇಶ್ವರ ಚಂದ್ರಶೇಖರ ಚಡಗ,ಶ್ರೀ ಬನ್ನಂಜೆ ಸಂಜೀವ ಸುವರ್ಣ, ಶ್ರೀಮತಿ ವೈದೇಹಿ,ಕಾರಂತ ಪುರಸ್ಕಾರ ಪಡೆದವರಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ವಹಿಸಲಿದ್ದಾರೆ.
ಕರ್ನಾಟಕ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕಾರದ ವಾದಿರಾಜ ಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ
ಗಣ್ಯರ ಉಪಸ್ಥಿತಿಯಲ್ಲಿ ಡಾ/ ನಾ. ಮೊಗಸಾಲೆ, ಕಾಂತಾವರ ಅವರಿಗೆ ಗೆಳೆಯರ ಬಳಗ ಕಾರಂತ ಪುರಸ್ಕಾರ -2024 ಪ್ರಶಸ್ತಿ ಪ್ರದಾನ ನೀಡಲಿದ್ದೇವೆ.
ಸಂಜೆ 5 ರಿಂದ ಕಾರ್ಯಕ್ರಮ ಹಾಗೂ ರಾತ್ರಿ ಶ್ರೀ ಮೆಕ್ಕೆಕಟ್ಟು ಮೇಳದ ಆಯ್ದ ಕಲಾವಿದರಿಂದ ಪೌರಾಣಿಕ ಯಕ್ಷಗಾನ “ಪಾರಿಜಾತ – ನರಕಾಸುರ” ನಡೆಯಲಿದೆ ಎಂದು ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ ಹೇಳಿದರು.
ಈ ಸಂದರ್ಭದಲ್ಲಿ ಕೆ. ಶೀನ, ಕಾರ್ಯದರ್ಶಿ ಕೆ. ಚಂದ್ರಶೇಖರ, ಸೋಮಯಾಜಿ, ಕೆ. ಉದಯಐತಾಳ, ಕೆ. ತಮ್ಮಯ್ಯ, ನಾಗರಾಜ್ ಉಪಾಧ್ಯ ಉಪಸ್ಥಿತರಿದ್ದರು.