ಡೈಲಿ ವಾರ್ತೆ: 23/OCT/2024
ವರದಿ: ಅಬ್ದುಲ್ ರಶೀದ್ ಮಣಿಪಾಲ
ಮಣಿಪಾಲ: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಬ್ಯಾಗ್ ಮರಳಿಸಿ ಆಟೋ ಚಾಲಕನ ಪ್ರಾಮಾಣಿಕತೆ – ಸರ್ವರಿಂದ ಮೆಚ್ಚಿಗೆ
ಮಣಿಪಾಲ: ಮಣಿಪಾಲ ಆಟೋ ಚಾಲಕರು ಮಾನವೀಯತೆಯ ವಿಷಯದಲ್ಲಿ ಇತ್ತೀಚೆಗೆ ತುಂಬಾ ಸುದ್ದಿಯಾಗುತ್ತಿದ್ದಾರೆ.
ಉಡುಪಿ ಜಿಲ್ಲಾ ಹೃದಯ ಭಾಗದಲಿರುವ ಮಣಿಪಾಲ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ.? ಇದೊಂದು ಆರೋಗ್ಯ, ಧಾರ್ಮಿಕ ಮತ್ತು ವಿದ್ಯಾ ಕೇಂದ್ರವಾಗಿ ವಿಶ್ವ ವಿಖ್ಯಾತಿ ಹೊಂದಿದೆ.
ಮಣಿಪಾಲಕ್ಕೆ ದೇಶ ವಿದೇಶಗಳಿಂದ ಈ ಕಾರಣಗಳಿಗಾಗಿ ಜನರು ಬರುತ್ತಾರೆ. ಇಂತವರಿಗೆಲ್ಲ ಸಂಪರ್ಕ ಸೇತುವಾಗಿ ಜೀವನಾಡಿಯಂತಿರುವವರು ಇಲ್ಲಿನ ಟ್ಯಾಕ್ಸಿ, ರಿಕ್ಷಾಗಳವರು.
ಮಣಿಪಾಲದ ಜಟ್ಟಿಗೇಶ್ವರ ಎಂಬ ಹೆಸರಿನ ರಿಕ್ಷಾ ಚಾಲಕ ಸತೀಶ್ ಎನ್. ನಿನ್ನೆ ರಾತ್ರಿ 11:00 ಗಂಟೆ ಹೊತ್ತಿಗೆ ಟ್ಯಾಪ್ಮಿಗೆ ಬಾಡಿಗೆಗೆ ಹೋಗಿದ್ದರು. ಗ್ರಾಹಕಾರನ್ನು ಬಿಟ್ಟು ಬರುವಾಗ ನಡು ರಸ್ತೆಯಲ್ಲಿ ಒಂದು ಬ್ಯಾಗ್ ಬಿದ್ದಿರುವುದು ಕಂಡಿತು. ಕುತೂಹಲದಿಂದ ಅದನ್ನೆತ್ತಿ ಪರೀಕ್ಷಿಸಿದಾಗ ಅದರಲ್ಲಿ ಬೆಳೆಬಾಳುವ ಆಪಲ್ ಕಂಪನಿಯ ಟ್ಯಾಬ್, ಕೊಡೆ, ಚಾರ್ಜರ್, ( ಅಂದಾಜು 80,000 ರೂಪಾಯಿ ಮೌಲ್ಯದ ವಸ್ತುಗಳು) ಹಾಗೂ ಟ್ಯಾಪ್ಮಿ ಕಾಲೇಜಿ ನಲ್ಲಿ ಕಲಿಯುವ ಸ್ಟೂಡೆಂಟ್ ನ ಐಡಿ ಕಾರ್ಡ್ ಇತ್ತು.
ಅದನ್ನು ಚಾಲಕ ಸತೀಶ್ ಸುರಕ್ಷಿತವಾಗಿ ಕೊಂಡೊಯ್ದು ಇಂದು ಬೆಳಿಗ್ಗೆ ವಿದ್ಯಾರ್ಥಿಯ ಐಡಿ ಆಧಾರದ ಮೇಲೆ, ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿಯವರ ಸಹಾಯದೊಂದಿಗೆ ವಿದ್ಯಾರ್ಥಿಯ ಫೋನ್ ನಂಬರ್ ಹುಡುಕಿ ಅವರನ್ನು ಸಂಪರ್ಕಿಸಿದರು. ಅವರನ್ನು ಸಂಘದ ಮಾಹಿತಿ ಕೇಂದ್ರಕ್ಕೆ ಕರೆಸಲಾಯಿತು. ಟ್ಯಾಬ್ ಹಾಗೂ ಇತರ ವಸ್ತುಗಳನ್ನು ಸತೀಶ್ ಎನ್. ಅವರ ಮುಖಾಂತರ ಸಂಘದ ಕಾರ್ಯದರ್ಶಿಯವರು ಸತ್ಕಾರ್ ನಿಲ್ದಾಣದ ನಾಯಕ ಭಾಸ್ಕರ್ ಶೆಟ್ಟಿ ಅವರ ಸಮ್ಮುಖದಲ್ಲಿ ಟಾಪ್ಮಿ ವಿದ್ಯಾರ್ಥಿಗೆ ಹಸ್ತಾಂತರಿಸಿದರು. ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡು ಚಿಂತಾಕ್ರಾಂತರಾಗಿದ್ದ ವಿದ್ಯಾರ್ಥಿಗೆ ಚಾಲಕ ಸತೀಶ್ ದೇವರಾಗಿಯೇ ಕಂಡರು. ತಮ್ಮ ಸ್ವತ್ತುಗಳನ್ನು ಸ್ವೀಕರಿಸಿದ ವಿದ್ಯಾರ್ಥಿ ಚಾಲಕ ಸತೀಶ್ ರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು.
ಒಂದೊಮ್ಮೆ ಮಣಿಪಾಲದ ರಿಕ್ಷಾದವರೆಂದರೆ ಜನರು ಅನುಮಾನದಿಂದ ನೋಡುವ ಪರಿಸ್ಥಿತಿ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರಿಕ್ಷಾದವರು ಗ್ರಾಹಕರನ್ನು ಮತ್ತು ಪ್ರಾಮಾಣಿಕ ಕಾರ್ಯಗಳಿಂದ ಈ ಅನುಮಾನ, ಅಪವಾದವನ್ನು ತೊಡೆದುಹಾಕಿದ್ದಾರೆ. ರಿಕ್ಷಾ ಚಾಲಕರೆಂದರೆ ಆಪತ್ಬಾಂಧವರು, ಪ್ರಾಮಾಣಿಕರು ಎಂಬ ಭಾವನೆ, ವಿಶ್ವಾಸ ಎಲ್ಲರಲ್ಲೂ ಮೂಡಿದೆ.