ಡೈಲಿ ವಾರ್ತೆ: 24/OCT/2024
ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿ 5 ಕೋಟಿ ರೂ. ಬೇಡಿಕೆ ಇಟ್ಟ ಆರೋಪಿಯ ಬಂಧನ!
ಮುಂಬೈ: ಸಂಚಾರ ಪೊಲೀಸರ ವಾಟ್ಸ್‌ಆ್ಯಪ್ ಸಹಾಯವಾಣಿಗೆ ಸಂದೇಶ ಕಳುಹಿಸಿ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ ಐದು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಜಾರ್ಖಂಡ್‌ನ ಜೆಮ್ಷೆಡ್‌ಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ತರಕಾರಿ ವ್ಯಾಪಾರಿ ಹುಸೆನ್ ಶೇಖ್ ಮೌಸಿನ್(24) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 17 ರ ಮಧ್ಯಾಹ್ನ ಶೇಖ್ ಮುಂಬೈ ಸಂಚಾರ ಪೊಲೀಸ್ ಸಹಾಯವಾಣಿಗೆ ಸಂದೇಶ ಕಳುಹಿಸಿದ್ದ. ಆತ ತನ್ನನ್ನು ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದ. ಸಲ್ಮಾನ್ ಖಾನ್ ಬಿಷ್ಣೋಯ್ ಸಮಾಜದವರಿಗೆ ಕ್ಷಮೆ ಕೇಳಬೇಕು. ಅದು ಸಾಧ್ಯವಾಗದೆ ಇದ್ದಲ್ಲಿ 5 ಕೋಟಿ ರೂ. ನೀಡಬೇಕು. ಇಲ್ಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಬಾಬಾ ಸಿದ್ಧಿಕ್‌ಗೆ ಆದ ಗತಿಯೇ ಸಲ್ಮಾನ್ ಖಾನ್‌ಗೂ ಆಗುತ್ತದೆ ” ಎಂದು ಹೇಳಿದ್ದ. ಬೆದರಿಕೆ ಸಂದೇಶದ ನಂತರ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಜಾರ್ಖಂಡ್ ಪೊಲೀಸರ ನೆರವು
ಬೆದರಿಕೆ ಸಂದೇಶದ ನಂತರ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ತನಿಖೆ ಆರಂಭವಾಗಿದ್ದ ಗೊತ್ತಾಗುತ್ತಿದ್ದಂತೆ ಆರೋಪಿಯು ಮತ್ತೆ ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಸಂದೇಶವನ್ನು ಕಳುಹಿಸಿ, ಕ್ಷಮೆಯಾಚಿಸಿ ತನಗೂ ಮತ್ತು ಬಿಷ್ಣೋಯ್ ಗ್ಯಾಂಗ್‌ಗೆ ಯಾವುದೇ ಸಂಬಂಧವಿಲ್ಲ ತಾನು ತಪ್ಪು ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದ. ಸದ್ಯ ಜಾರ್ಖಂಡ್ ಪೊಲೀಸರ ನೆರವು ಪಡೆದ ಮುಂಬೈ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಜೆಮ್‌ಶೆಡ್‌ಪುರ ಪೊಲೀಸರ ವಶದಲ್ಲಿರುವ ಆರೋಪಿಯನ್ನು ಮುಂಬೈಗೆ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಅ.12ರಂದು ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಹಾಗೂ ಶಾಸಕ ಬಾಬಾ ಸಿದ್ದಿಕಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಗ್ಯಾಂಗ್‌ಸ್ಟರ್ ಬಿಷ್ಣೋಯ್ ಗ್ಯಾಂಗ್ ಈ ಹತ್ಯೆಯ ಹೊಣೆ ಹೊತ್ತಿದೆ. ಈ ವರೆಗೆ 10 ಆರೋಪಿಗಳನ್ನು ಬಂಧಿಸಿರುವ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.
ಬಾಬಾ ಸಿದ್ಧಿಕಿ ಹಾಗೂ ಸಲ್ಮಾನ್ ಆತ್ಮೀಯ ಸ್ನೇಹಿತರಾಗಿದ್ದರು. ಸಿದ್ಧಿಕಿ ಮೇಲೆ ಗುಂಡಿನ ದಾಳಿ ವಿಷಯ ತಿಳಿಯುತ್ತಿದ್ದಂತೆ ಖಾಸಗಿ ವಾಹಿನಿಯಲ್ಲಿ ನೆಡೆಯುತ್ತಿದ್ದ ರಿಯಾಲಿಟಿ ಶೋ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಸಲ್ಮಾನ್ ಆಸ್ಪತ್ರೆಗೆ ಧಾವಿಸಿದ್ದರು. ಬಾಬಾ ಸಿದ್ಧಿಕಿ ಹತ್ಯೆಯ ನಂತರ ಸಲ್ಮಾನ್‌ಗೆ ಬಿಗಿ ಭದ್ರತೆಯನ್ನು ನೀಡಲಾಗಿದೆ. ಸಲ್ಮಾನ್ ನಿವಾಸದ ಸುತ್ತ ಕಮಾಂಡೋ ಸೆಂಟರ್ ತೆರೆದು ನಿಗಾವಹಿಸಲಾಗಿದೆ.
ಬಿಷ್ಣೋಯ್ ಸಮಾಜ ಪವಿತ್ರವೆಂದು ಪರಿಗಣಿಸಲಾದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾದಾಗಿನಿಂದಲೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಮೇಲೆ ದ್ವೇಷ ಸಾಧಿಸುತ್ತಾ ಬಂದಿದೆ. ಈ ಹಿಂದೆ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಕೂಡಾ ನಡೆದಿತ್ತು.