ಡೈಲಿ ವಾರ್ತೆ: 26/OCT/2024
ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ದುರುಪಯೋಗ; ತನಿಖೆಗೆ ಒತ್ತಾಯ
ಉಡುಪಿ: ಉಡುಪಿಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಲಿ. ನಲ್ಲಿ ನಡೆದಿದೆ ಎನ್ನಲಾದ ಆಡಳಿತ ದುರುಪಯೋಗ ಮತ್ತು ಸಾಲಗಾರರಿಗೆ ನೀಡುತ್ತಿರುವ ಕಿರುಕುಳ ವಿರುದ್ಧ ಸೂಕ್ತ ತನಿಖೆ ನಡೆಯಬೇಕು ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಮುಖಂಡ ನಾಗೇಂದ್ರ ಪುತ್ರನ್ ಕೋಟ ಆಗ್ರಹಿಸಿದ್ದಾರೆ.
ಬ್ಯಾಂಕಿನವರು ಸಾಲ ವಸೂಲಾತಿ ಎಂಬ ನೆಪದಲ್ಲಿ ಸಣ್ಣಮಟ್ಟದ ಸಾಲ ನೀಡಿ ದೊಡ್ಡ ಮಟ್ಟದ ಸಾಲಕ್ಕೆ ವಸೂಲಿಗೆ ನಿಂತಿದ್ದಾರೆ. ಪದೇ ಪದೇ ಅನ್ಯಾಯಕ್ಕೆ ಒಳಗಾದವರ ಮನೆಗೆ ಬಂದು ಮಾಡದೇ ಇರುವ ಸಾಲಕ್ಕೆ ಸಾಲ ಮಾಡಿದ್ದೀರಿ ಕಟ್ಟಿ ಎಂದು ನಿರಂತರ ಮಾನಸಿಕ ಹಿಂಸೆ ನೀಡುತ್ತಾ ಇದ್ದಾರೆ. ಒಂದು ಕಡೆಯಲ್ಲಿ ಬ್ಯಾಂಕಿನವರು ಮೃತ ಹೊಂದಿದ ಬ್ಯಾಂಕ್ ಸಿಬಂದಿ ಸುಬ್ಬಣ್ಣನವರೇ 1413 ಜನರಿಗೆ ಅಕ್ರಮ ಹಣ ನೀಡಿ 28 ಕೋಟಿ ಬ್ಯಾಂಕಿಗೆ ಮೋಸ ಮಾಡಿದ್ದಾರೆ ಎಂದು ಹೇಳಿಕೆ ನೀಡುತ್ತಾರೆ. ಇನ್ನೊಂದು ಕಡೆ ನೀವು ಸಾಲ ಪಡೆದಿದ್ದೀರಿ ಹಣ ವಾಪಾಸ್ ಮಾಡಿ ಎಂದು ಮಾನಸಿಕ ಕಿರುಕುಳ ನೀಡುತ್ತಾ ಇದ್ದಾರೆ. ಈ ಬಗ್ಗೆ ಈಗಾಗಲೇ ಬ್ರಹ್ಮಾವರ ಹಾಗೂ ಮಲ್ಪೆ, ಉಡುಪಿ ಟೌನ್ ಸ್ಟೇಷನ್‌ನಲ್ಲಿ ಸಂತ್ರಸ್ಥರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಇರುವಾಗಲೂ ಕೂಡಾ ಬ್ಯಾಂಕಿನವರು ಮನೆ ಬಾಗಿಲಿಗೆ ಬಂದು ತೊಂದರೆ ಕೊಡುತ್ತಾ ಇದ್ದಾರೆ.
ಸದ್ರಿ ಪ್ರಕರಣ ಇತ್ಯರ್ಥವಾಗುವ ತನಕ ಬ್ಯಾಂಕಿನವರು ಯಾರ ಮನೆಗೂ ಕೂಡ ಹೋಗಬಾರದು. ಪ್ರಕರಣದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿಗಳು ಎಲ್ಲರನ್ನೂ ತನಿಖೆ ನಡೆಸಬೇಕಾಗಿದೆ ಎಂದು ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.