ಡೈಲಿ ವಾರ್ತೆ: 27/OCT/2024
ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು, ಸುಣ್ಣಾರಿ ಇದರ ವಾರ್ಷಿಕೋತ್ಸವ : ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಸುಲಭ ಆದರೆ ಅದನ್ನು ಸುವ್ಯವಸ್ಥಿತವಾಗಿ ಬೆಳೆಸುವುದು ಬಹಳ ಕಷ್ಟದ ಕೆಲಸ – ಭಾಸ್ಕರ್ ಶೆಟ್ಟಿ
ಕುಂದಾಪುರ: ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಸುಲಭ ಆದರೆ ಅದನ್ನು ಸುವ್ಯವಸ್ಥಿತವಾಗಿ ಬೆಳೆಸುವುದು ಬಹಳ ಕಷ್ಟದ ಕೆಲಸ. ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲೊಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯನ್ನು ಅತ್ಯಂತ ಆಧುನಿಕ ಶೈಲಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ ಕೀರ್ತಿ ಎಂ. ಮಹೇಶ್ ಹೆಗ್ಡೆಯವರಿಗೆ ಸಲ್ಲುತ್ತದೆ. ಹೆಸರಿಗೆ ತಕ್ಕಂತೆ ಇದು ಎಕ್ಸಲೆಂಟ್ ಆಗಿಯೇ ಇದೆ ಎಂದು ಉಡುಪಿ ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ಎಸ್. ಹೇಳಿದರು.
ಅವರು ಅ. 26 ರಂದು ಶನಿವಾರ ಮಧ್ಯಾಹ್ನ ಎಕ್ಸಲೆಂಟ್ ಕ್ಯಾಂಪಸ್ ನಲ್ಲಿ ಜರಗಿದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು, ಸುಣ್ಣಾರಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯಾಗಬೇಕೆಂದರೆ ಆತನಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಗಳಲ್ಲಿ ತೊಡಗಿಸುವಂತ ಮಾದರಿ ಶಿಕ್ಷಣವನ್ನು ಕೊಡಬೇಕು. ಕೇವಲ ಶಿಕ್ಷಣ ಮಾತ್ರವಲ್ಲದೆ ಅದರೊಂದಿಗೆ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಹೀಗೆ ಹತ್ತುಹಲವು ಪ್ರಕಾರದ ಶಿಕ್ಷಣವನ್ನು ನೀಡುವುದರ ಮೂಲಕ ಆ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ವಿಕಾಸನಗೊಳಿಸುವ, ಆತನಿಗೆ ಸ್ವತಂತ್ರವಾಗಿ ತನ್ನ ಬದುಕನ್ನು ಕಟ್ಟಿಕೊಳ್ಳುವ ಸಾಮರ್ಥ್ಯ ಬರುವಂತೆ ಶಿಕ್ಷಣ ವ್ಯವಸ್ಥೆಯನ್ನ ಈ ಎಕ್ಸಲೆಂಟ್ ಕಾಲೇಜಿನಲ್ಲಿ ಅಳವಡಿಸಲಾಗಿದೆ. ಈ ಸಂಸ್ಥೆಯ ಅಧ್ಯಾಪಕರ ವರದಿ ಪ್ರಕಾರ ಶಿಕ್ಷಣ ಪ್ರೇಮಿ, ಶಿಕ್ಷಣ ಸ್ನೇಹಿ, ಅನೇಕ ಪುರೋಗಾಮಿಯಾದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಬಹಳ ಒಳ್ಳೆಯ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಭಾಸ್ಕರ್ ಶೆಟ್ಟಿ ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಯುನಿಟ್ ಆಫ್ ಎಮ್.ಎಮ್. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ವಹಿಸಿದ್ದರು.
ಗೌರವ ಉಪಸ್ಥಿತಿ: ಎಕ್ಸಲೆಂಟ್ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ ಇದರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜಿನಿ ಪಿ ಆಚಾರ್ಯ ಉಪಸ್ಥಿತರಿದ್ದರು.
ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಸ್ವಾಗತ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದ ವಿದ್ಯಾರ್ಥಿನಿಯರಿಂದ ನಡೆಯಿತು.
ಎಕ್ಸಲೆಂಟ್ ಪದವಿಪೂರ್ವ ಕಾಲೇಜ್ ಮತ್ತು ಹೈಸ್ಕೂಲ್ ಸುಣ್ಣಾರಿ ಇದರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.