ಡೈಲಿ ವಾರ್ತೆ: 28/OCT/2024

ಡಾ. ಆನಂದ ಸಂಕೇಶ್ವರಗೆ ಲಾಜಿಸ್ಟಿಕ್ ಐಕಾನ್ ಪ್ರಶಸ್ತಿ

ಬೆಂಗಳೂರು: ಜೆಕೆ ಟೈರ್ ಕಂಪನಿ 20 ವರ್ಷಗಳ ಸಂಭ್ರಮಾಚರಣೆ ನಿಮಿತ್ತ ಇತ್ತೀಚೆಗೆ ಸಿಂಗಾಪುರದಲ್ಲಿ ಆಯೋಜಿಸಿದ್ದ ಉನ್ನತ ಮಟ್ಟದ ಸಮ್ಮೇಳನದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರಿಗೆ ವರ್ಷದ ಲಾಜಿಸ್ಟಿಕ್ ಐಕಾನ್ ಪ್ರಶಸ್ತಿ ನೀಡಿ ಗೌರವಿಸಿದೆ.

ಆಧುನಿಕ ಲಾಜಿಸ್ಟಿಕ್ಸ್ ನಿರ್ವಹಣೆಯಲ್ಲಿ ಪರಿವರ್ತನೆಯ ಪಾತ್ರ ನಿರ್ವಹಿಸಿದ ಸರಕು ಸಾಗಣೆ ಉದ್ಯಮದ ಅಗ್ರ ವ್ಯಕ್ತಿಯೆಂದು ಗುರುತಿಸಿ ಡಾ. ಆನಂದ ಸಂಕೇಶ್ವರ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಮ್ಮೇಳನದಲ್ಲಿ ದೇಶ ಅಗ್ರ 100 ಫ್ಲೀಟ್ ಮಾಲೀಕರು, ಉದ್ಯಮದ ಪ್ರಮುಖರು, ಪಾಲುದಾರರು ಭಾಗವಹಿಸಿದ್ದರು.
ದೇಶದ ಅತಿ ದೊಡ್ಡ ಮತ್ತು ಅತ್ಯಂತ ಗೌರವಾನ್ವಿತ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರೆಂಬ ಹೆಗ್ಗಳಿಕೆಗೆ ವಿಆರ್‌ಎಲ್ ಲಾಜಿಸ್ಟಿಕ್ಸ್ ಪಾತ್ರವಾಗಲು ಡಾ. ಆನಂದ ಸಂಕೇಶ್ವರ ಅವರ ನಾಯಕತ್ವವೇ ಕಾರಣವೆಂದು ಗುರುತಿಸಲಾಗಿದೆ. ಅವರ ಹೊಸ ವಿಧಾನ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟ, ದಕ್ಷತೆ ಮತ್ತು ಸುಸ್ಥಿರತೆ ಮಾನದಂಡಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಡಾ. ಆನಂದ ಸಂಕೇಶ್ವರ ಮಾತನಾಡಿ, ಲಾಜಿಸ್ಟಿಕ್ಸ್‌ನ ಯಶಸ್ಸಿಗೆ ತಮ್ಮ ತಂಡ ಹಾಗೂ ತಂದೆ ಡಾ. ವಿಜಯ ಸಂಕೇಶ್ವರರ ಮಾರ್ಗದರ್ಶನ ಕಾರಣವಾಗಿದೆ. ಜೆಕೆ ಟೈರ್ ಕಂಪನಿಯ ಪಾತ್ರ ಸೇರಿ ಅಸಂಖ್ಯಾತ ಪಾಲುದಾರರು ಮತ್ತು ಗ್ರಾಹಕರ ನಂಬಿಕೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಜೆಕೆ ಟೈರ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಜೆಕೆ ಟೈರ್ ಭಾರತದ ಲಾಜಿಸ್ಟಿಕ್ಸೃ್ ವಲಯದ ಕಾರ್ಯಾಚರಣೆಯ ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಬದ್ಧತೆಯೊಂದಿಗೆ ಟೈರ್ ತಂತ್ರಜ್ಞಾನ ಮತ್ತು ಫ್ಲೀಟ್ ನಿರ್ವಹಣೆಯಲ್ಲಿ ಪ್ರಗತಿಯನ್ನು ಸಾಧಿಸಿದೆ.
ಇಂದು ಈ ಉದ್ಯಮವನ್ನು ಪರಿವರ್ತಿಸಲು ಸಹಾಯ ಮಾಡಿದ ವ್ಯಕ್ತಿಗಳ ಸಾಧನೆಗಳನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ಅವರಲ್ಲಿ ಡಾ. ಆನಂದ ಸಂಕೇಶ್ವರ ಅಗ್ರಗಣ್ಯರು. ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ ಎಂದರು.