ಡೈಲಿ ವಾರ್ತೆ: 30/OCT/2024

ದರ್ಶನ್​ಗೆ ದೀಪಾವಳಿ ಉಡುಗೊರೆ: ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು

ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್​ಗೆ ದೀಪಾವಳಿ ಶುಭ ತಂದಿದೆ.

ದರ್ಶನ್​ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್​ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದ್ದು, ಮಧ್ಯಂತರ ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ಮಾನ್ಯ ನ್ಯಾಯಾಲಯ ವಿಧಿಸಿದೆ.

ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದರ್ಶನ್​ರ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಹೈಕೋರ್ಟ್​ನಲ್ಲಿ ಅರ್ಜಿ ಹಾಕಿದ್ದರು. ಆದರೆ ಹೈಕೋರ್ಟ್​ನಲ್ಲಿ ದರ್ಶನ್ ಆರೋಗ್ಯ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಪರಿಗಣಿಸಿ ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು. ದರ್ಶನ್​ಗೆ ತೀವ್ರ ಬೆನ್ನುನೋವಿನ ಸಮಸ್ಯೆ ಇದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ಒಂದೊಮ್ಮೆ ಚಿಕಿತ್ಸೆ ತಡವಾದರೆ ಅವರು ಪಾರ್ಶ್ವವಾಯುವಿಗೆ ಈಡಾಗುವ ಆತಂಕ ಇದೆ ಎಂದು ವೈದ್ಯರು ನೀಡಿದ್ದ ವರದಿಯನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು, ದರ್ಶನ್​ರ ಆರೋಗ್ಯ ಸಮಸ್ಯೆಯ ಕುರಿತು ವರದಿ ನೀಡಲು ಮೆಡಿಕಲ್ ಬೋರ್ಡ್ ಸ್ಥಾಪನೆ ಮಾಡಬೇಕೆಂಬ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದರು. ಅಲ್ಲದೆ ಈಗ ಸಲ್ಲಿಸಲಾಗಿರುವ ವೈದ್ಯ ವರದಿಯಲ್ಲಿ ದರ್ಶನ್​ಗೆ ಆಗಬೇಕಿರುವ ಶಸ್ತ್ರಚಿಕಿತ್ಸೆ, ಗುಣವಾಗಲು ತೆಗೆದುಕೊಳ್ಳುವ ಸಮಯ ನಿಖರವಾಗಿಲ್ಲವೆಂದು ವಾದಿಸಿದ್ದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವೇಶ್ವರ ಭಟ್ ಅವರು, ‘ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಇದೀಗ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ. ಆದರೆ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ. ದರ್ಶನ್​ಗೆ ಹೆಚ್ಚಿನ ಷರತ್ತುಗಳನ್ನೇನೂ ನ್ಯಾಯಾಧೀಶರು ವಿಧಿಸಿಲ್ಲ. ಎಸ್​ಪಿಪಿ ಮನವಿ ಮೇರೆಗೆ ಪಾಸ್​ಪೋರ್ಟ್​ ವಶಕ್ಕೆ ನೀಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಒಂದು ವಾರದ ಒಳಗಾಗಿ ನ್ಯಾಯಾಲಯಕ್ಕೆ ಚಿಕಿತ್ಸೆಯ ವಿವರಗಳನ್ನು ಸಲ್ಲಿಸಬೇಕಿದೆ.