ಡೈಲಿ ವಾರ್ತೆ: 30/OCT/2024

ಬೆಂಗಳೂರಿನಲ್ಲಿ 5 ಲಕ್ಷ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ: ಓರ್ವ ಬಂಧನ

ಬೆಂಗಳೂರು: ನಗರದಲ್ಲಿ 5 ಲಕ್ಷ ರೂ. ಮೌಲ್ಯದ ಅಕ್ರಮ‌ ಗೋವಾ ಮದ್ಯ ದಾಸ್ತಾನು ಮಾಡಿಟ್ಟಿದ್ದ ಆರೋಪಿ‌ಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿರುವಂತಹ ಘಟನೆ ಕತ್ರಿಗುಪ್ಪೆಯಲ್ಲಿ ನಡೆದಿದೆ. ದಕ್ಷಿಣ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನೇತೃತ್ವದಲ್ಲಿ ಆರೋಪಿ ಪುರುಷೋತ್ತಮ್ ಮನೆ ಮೇಲೆ ರೇಡ್ ಮಾಡಿ ಬಂಧಿಸಲಾಗಿದೆ. ಮನೆಯಲ್ಲಿದ್ದ ಮದ್ಯದ ಬಾಟಲಿ ನೋಡಿ ಒಂದು ಕ್ಷಣ ಅಬಕಾರಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಸದ್ಯ ಅಬಕಾರಿ ಕಾಯ್ದೆ 1965ರ ಕಲಂ 11, 14, 15, 38(ಎ) ಹಾಗೂ 43(ಎ) ಅಡಿ ಕೇಸ್ ದಾಖಲಿಸಲಾಗಿದ್ದು, 144 ಬಾಟಲ್​ಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿ ಪುರುಷೋತ್ತಮ್​​​ ಗೋವಾದಲ್ಲಿರುವ ಅಂಗಡಿಯವರ ಜತೆ ಸಂಪರ್ಕ ಹೊಂದಿದ್ದು, ಕಡಿಮೆ ಬೆಲೆಗೆ ಮದ್ಯ ತರಿಸಿಕೊಳ್ಳುತ್ತಿದ್ದ. ಗೋವಾದಿಂದ ಬಸ್​​ನಲ್ಲಿ ಮದ್ಯದ ಬಾಟಲ್ ಲೋಡ್ ಮಾಡಿ ಕಳಿಸುತ್ತಿದ್ದು, ಬೆಂಗಳೂರಿಗೆ ಬಸ್​ ಬರ್ತಿದ್ದಂತೆ ಪುರುಷೋತ್ತಮ್ ಇಳಿಸಿಕೊಳ್ಳುತ್ತಿದ್ದ. ಬಳಿಕ ಮದ್ಯದ ಬಾಟಲ್​ಗಳನ್ನ ಮನೆಯಲ್ಲಿ ಸಂಗ್ರಹಿಸಿಡುತ್ತಿದ್ದ.

ಘಟನೆ ವಿವರ :
ಅ.27ರಂದು ಬನಶಂಕರಿ 2ನೇ ಹಂತದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಆರೋಪಿ ಪುರುಷೋತ್ತಮ್ ನಿಂತಿದ್ದ. ಆತನ ಚಲನವಲನ ಅಬಕಾರಿ ಸಿಬ್ಬಂದಿಗೆ ಅನುಮಾನ ಮೂಡಿಸಿತ್ತು. ಈ ವೇಳೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಗೋವಾದಲ್ಲಿ ಮಾತ್ರ ಮಾರಾಟ (FOR SALE IN GOA ONLY) ಎಂದು ಬಾಟಲ್ ಮೇಲೆ ನಮೂದಿಸಿರುವುದು ಪತ್ತೆ ಆಗಿದೆ.

ಬಳಿಕ ಆರೋಪಿ ಮೊಬೈಲ್ ಪರಿಶೀಲನೆ ನಡೆಸಿದ ಅಬಕಾರಿ ಸಿಬ್ಬಂದಿ, ಈ ವೇಳೆ ಗೋವಾದ ಮದ್ಯದ ಅಂಗಡಿ ಜೊತೆಗಿನ ನಂಟು ಬಯಲಾಗಿದೆ. ಗೋವಾದಿಂದ ಬೆಂಗಳೂರಿಗೆ ಮದ್ಯ ತರಿಸಿದ್ದ ಬಿಲ್​ಗಳು ಕೂಡ ಪತ್ತೆ ಆಗಿದ್ದು, ಮನೆಗೆ ಕರೆದೊಯ್ದು ಪರಿಶೀಲಿಸಿದಾಗ ಮದ್ಯದ ಬಾಟಲ್​ಗಳು​ ಪತ್ತೆ ಆಗಿವೆ.