ಡೈಲಿ ವಾರ್ತೆ: 30/OCT/2024
ಚುನಾವಣೆಗಾಗಿ ಬಿಜೆಪಿಯವರು ವಕ್ಫ್ ವಿವಾದ ಸೃಷ್ಟಿಸುತ್ತಿದ್ದಾರೆ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬಿಜೆಪಿಯವರಿಗೆ ಉಪ ಚುನಾವಣೆಗೆ ಯಾವುದೇ ವಿಷಯಗಳಿಲ್ಲದ ಕಾರಣ ಈ ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ವಿವಾದ ಇಲ್ಲದೇ ಇರುವುದನ್ನು ವಿವಾದವನ್ನಾಗಿಸಲು ಹೊರಟಿದ್ದಾರೆ. ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ. ಹಾಗಾಗಿ, ಉಪ ಚುನಾವಣೆ ವೇಳೆ ಈ ವಿಷಯವನ್ನು ವಿವಾದವನ್ನಾಗಿಸುತ್ತಿದ್ದಾರೆ ಎಂದರು.
ವಕ್ಫ್ ನೋಟಿಸ್ ಬಂದ ರೈತರು ಆತಂಕಗೊಳ್ಳಬೇಕಿಲ್ಲ, ಹಲವಾರು ವರ್ಷಗಳಿಂದ ರೈತರ ಸ್ವಾಧೀನದಲ್ಲಿರುವ ಜಮೀನನ್ನು ಖಾಲಿ ಮಾಡಿಸುವುದಿಲ್ಲ ಎಂದು ಸಿಎಂ ಭರವಸೆ ನೀಡಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು, ವಕ್ಫ್ ಬೋರ್ಡ್‌ನವರು ಜಿಲ್ಲಾಧಿಕಾರಿಗಳ ಮುಖಾಂತರ ನೋಟಿಸ್ ನೀಡಿಸಿದ್ದಾರೆ. ನೋಟಿಸ್ ವಾಪಸ್ ಪಡೆಯಿರಿ, ಈ ಬಗ್ಗೆ ಪರಿಶೀಲಿಸೋಣ ಎಂದು ಮುಖ್ಯಮಂತ್ರಿಗಳು ಸಹ ಸೂಚನೆ ನೀಡಿದ್ದಾರೆ. ಈ ವಿಷಯ ಇಲ್ಲಿಗೆ ಮುಗಿದಿದೆ. ಪರಿಶೀಲನೆ ಮಾಡುವವರೆಗೂ ಯಾವುದೇ ರೈತರಿಗೂ ನೋಟಿಸ್ ನೀಡುವುದು ಬೇಡ ಎಂದು ಸಹ ಸಿಎಂ ಸ್ಪಷ್ಟಪಡಿಸಿದ್ದಾರೆ. ಈ ವಿಚಾರಕ್ಕೆ ಬಿಜೆಪಿಯವರು ಇಲ್ಲದಿರುವ ಬಣ್ಣಕಟ್ಟಿ ದೊಡ್ಡ ವಿಷಯ ಮಾಡಲು ಹೊರಟಿದ್ದಾರೆ. ಆಡಳಿತಾತ್ಮಕವಾಗಿ ನೋಟಿಸ್ ಹೋಗಿದೆ. ಅದನ್ನು ವಾಪಸ್ ಪಡೆಯಲಾಗುವುದು. ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಹೇಳಲಾಗಿದೆ.
ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗ ಸೇರಿದಂತೆ ಯಾವುದೇ ಸಮುದಾಯ ಸರ್ಕಾರದಿಂದ ಒಂದಷ್ಟು ಸಹಾಯ ಬಯಸುತ್ತದೆ. ಬಿಜೆಪಿಯವರಿಗೆ ಇದನ್ನು ಸಹಿಸಲು ಆಗುವುದಿಲ್ಲ. ಆ ಸಮುದಾಯಗಳು ಹಾಗೆಯೇ ಇರಬೇಕು. ಇವರು ಮಾತ್ರ ಚೆನ್ನಾಗಿರಬೇಕು ಎಂಬ ತತ್ವದವರು ಎಂದು ಕಿಡಿಕಾರಿದರು.