ಡೈಲಿ ವಾರ್ತೆ: 01/NOV/2024

ಉಡುಪಿ ಜಿಲ್ಲಾಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಉಡುಪಿ: ಉಡುಪಿ ಜಿಲ್ಲಾಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನ. 01 ರಂದು ಶುಕ್ರವಾರ ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಧ್ವಜಾರೋಹಣ ನೆರವೇರಿಸಿದರು. ಅವರು ಮಾತನಾಡಿ 69 ನೇ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಈ ನಮ್ಮ ನಾಡಿನ ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಗಳನ್ನು ನೆನೆದು ಅವುಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದರ ಮೂಲಕ ಅವುಗಳನ್ನು ಅಭಿವೃದ್ಧಿಗೊಳಿಸುವ ಹಾಗೂ ಇವುಗಳ ಉಳಿವಿಗಾಗಿ ನಾವೆಲ್ಲರೂ ಧೀಕ್ಷೆ ತೊಡುವ ದಿನ ಇದಾಗಿದೆ ಎಂದರು.

ಕನ್ನಡ ರಾಜ್ಯ ಸ್ಥಾಪನೆಗೆ ಕನ್ನಡ ನುಡಿಯನ್ನು ಕಟ್ಟುವ, ಉಳಿಸಿ-ಬೆಳೆಸುವ ಕಾಯಕದಲ್ಲಿ ತೊಡಗಿದವರ ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಅನೇಕರು ಶ್ರಮಿಸಿದ್ದು, ಶ್ರಮಿಸಿದವರನ್ನೆಲ್ಲಾ ಈ ದಿನ ನಾಡ ಉತ್ಸವದಲ್ಲಿ ಗೌರವ ಪೂರ್ವಕವಾಗಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು.
ದೇಶದ ಭಾಷೆ ಮತ್ತು ಸಾಹಿತ್ಯ ಪರಂಪರೆಯಲ್ಲಿ ಕನ್ನಡ ನಾಡು ಮತ್ತು ಕನ್ನಡ ಭಾಷೆಗೆ ಉನ್ನತ ಸ್ಥಾನವಿದೆ. ಕನ್ನಡ ಭಾಷೆಯು 8 ಬಾರಿ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ನಮ್ಮ ಸಾಹಿತ್ಯ ಭಾಷೆಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಕನ್ನಡ ಬರಿ ಭಾಷೆಯಲ್ಲ. ಇದೊಂದು ಶಕ್ತಿ. ನಮ್ಮ ನಾಡು-ನುಡಿ, ಸಂಸ್ಕೃತಿಗೆ ಭವ್ಯವಾದ 2000 ವರ್ಷಗಳಿಗೂ ಮೀರಿದ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಹಬ್ಬಿದೆ ಎಂದು ಕನ್ನಡದ ಮೊದಲ ಕೃತಿ “ಕವಿರಾಜಮಾರ್ಗ” ದಲ್ಲಿ ಉಲ್ಲೇಖಿಸಿರುವುದು ಇದಕ್ಕೆ ಸಾಕ್ಷಿ.

ಇಂತಹ ಭವ್ಯ ಪರಂಪರೆಯ ಈ ನಮ್ಮ ನೆಲದ ಸಂಪತ್ತು, ಸಂಪ್ರದಾಯ, ಪರಂಪರೆ, ಕಲೆ, ಸಂಸ್ಕೃತಿ ಹಾಗೂ ಭಾಷೆ ಇವುಗಳನ್ನೆಲ್ಲಾ ಉಳಿಸಿ-ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯ…ಮಾತೃ ಭಾಷೆಯನ್ನು ಗೌರವಿಸಬೇಕೆಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ್ದರು ಎಂಬುದನ್ನು ಮನಗಂಡು ಮಾತೃಭಾಷೆಗೆ ಪ್ರಧಾನ ಸ್ಥಾನ ನೀಡಬೇಕಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬಳಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥ ಸಂಚಲದಲ್ಲಿ ಗೌರವ ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ವೇಳೆ ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ್ ಸುರೇಂದ್ರ ಅಡಿಗ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.