


ಡೈಲಿ ವಾರ್ತೆ: 05/NOV/2024



ಆಟೋ ಆಸೆ ತೋರಿಸಿ, ಡಬ್ಬದ ಮೇಲೆ ಕೂರಿಸಿ ಪಟಾಕಿ ಹಚ್ಚಿ ಯುವಕನ ಪ್ರಾಣ ತೆಗೆದ ದುರುಳರು
ಬೆಂಗಳೂರು: ಪಟಾಕಿ ಜೊತೆ ಹುಡುಗಾಟವಾಡಲು ಹೋಗಿ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಕೋಣನಕುಂಟೆ ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ.
ಮೃತ ಯುವಕ ಶಬರಿಶ್ (32) ಎಂದು ಗುರುತಿಸಲಾಗಿದೆ.
ಯುವಕರ ಹುಚ್ಚಾಟ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿನ ಐದಾರು ಮಂದಿ ಯುವಕರು ಮೃತ ಶಬರಿಗೆ ಸವಾಲು ಹಾಕುತ್ತಾರೆ. ಪಟಾಕಿ ಹಚ್ಚಿ, ಡಬ್ಬದಿಂದ ಮುಚ್ಚಿ, ಅದರ ಮೇಲೆ ಕೂರುತ್ತೀಯಾ ಅಂತ ಸವಾಲು ಹಾಕಿದ್ದಾರೆ. ಅದರಂತೆ ಡಬ್ಬದೊಳಗೆ ಪಟಾಕಿ ಇರಿಸಿ ಅದರ ಮೇಲೆ ಶಬಿರನನ್ನು ಕೂರಿಸಿದ್ದಾರೆ. ನಂತರ ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲ ಓಡಿ ಹೋಗಿದ್ದಾರೆ. ಬಳಿಕ, ಪಟಾಕಿ ಸ್ಪೋಟಗೊಂಡು ಶಬಿರನ ಹಿಂಬದಿ ಮತ್ತು ಗುಪ್ತಾಂಗಗಳಿಗೆ ತೀವ್ರ ಗಾಯವಾಗಿದೆ.
ಕೂಡಲೆ ಶಬಿರನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಿಸದೆ ಎರಡು ದಿನಗಳ ಬಳಿಕ ಶಬಿರ ಸುಟ್ಟಗಾಯಗಳ ವಿಭಾಗದಲ್ಲಿ ಮೃತಪಟ್ಟಿದ್ದಾನೆ. ಹುಡುಗರ ಹುಚ್ಚಾಟದ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಟೋ ಪಟಾಕಿ ಡಬ್ಬ ಮೇಲೆ ಕುಳಿತರೆ ಆಟೋ ಕೊಡಿಸ್ತೀವು ಅಂತ ಚಾಲೆಂಜ್ ಮಾಡಿದ್ದು, ಆಟೋ ಬರುತ್ತೆ ಅಂತ ಶಬರಿ ಪಟಾಕಿ ಡಬ್ಬ ಮೇಲೆ ಕುಳಿತಿದ್ದನು ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಸದ್ಯ ಆರು ಜನರ ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೋಣನಕುಂಟೆ ಪೊಲೀಸರು ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಬಂಧಿಸಿ ತನಿಖೆ ನಡೆಸಿದ್ದಾರೆ.