ಡೈಲಿ ವಾರ್ತೆ: 10/NOV/2024

ಕೋಟ ಥೀಂ ಪಾರ್ಕ್ ಡಾ.ಶಿವರಾಮ ಕಾರಂತ ಪ್ರಶಸ್ತಿ (ಸವಿನ್ಯ) ಪ್ರದಾನ:
ಜ್ಞಾನ ಜೀವನದಲ್ಲಿ ಸಾರ್ಥಕತೆಯ ಬದುಕು ಕಲಿಸಿಕೊಡುತ್ತದೆ – ರಾಜ್ಯಪಾಲ ಸಿ.ಎಚ್ ವಿಜಯಶಂಕರ್

ಕೋಟ: ಜ್ಞಾನ ಜೀವನದಲ್ಲಿ ಸಾರ್ಥಕತೆಯ ಬದುಕು ಕಲಿಸಿಕೊಡುತ್ತದೆ. ಜ್ಞಾನದ ದೀವಿಗೆ ಎಲ್ಲ ಕಾಲಕ್ಕೂ ಶಾಶ್ವತ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್ ವಿಜಯಶಂಕರ್ ಹೇಳಿದರು.

ಕೋಟದ ಡಾ. ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಭಾನುವಾರ ಕೋಟತಟ್ಟು ಗ್ರಾಮ ಪಂಚಾಯಿತಿ, ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಉಡುಪಿಯ ಡಾ. ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ನಡೆದ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು 20ನೇ ವರ್ಷದ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ (ಸವಿನ್ಯ ಅನುಭವಗಳ ನಾವಿನ್ಯ) ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ನೇರ ನುಡಿಯ, ಅಪ್ಪಟ ಪರಿಸರವಾದಿಯಾಗಿದ್ದ ಶಿವರಾಮ ಕಾರಂತರನ್ನು ಇಡೀ ಲೋಕವೇ ಗೌರವಿಸುತ್ತಿದೆ. ಲೌಕಿಕ ಅಲೌಕಿಕ ಜ್ಞಾನದ ದೀವಿಗೆಯಾಗಿದ್ದ ಕಾರಂತರು ಕೋಟದ ಸುಪುತ್ರ ಎಂದು ಹೇಳಿದರು. ಶಿವರಾಮ ಕಾರಂತರ ಜೀವಂತಿಕೆಯನ್ನು ಉಳಿಸಿಕೊಂಡು ಬಂದ ಕೋಟದ ಇಂತಹ ಕಾರ್ಯಕ್ರಮಗಳು ಇತರೆ ಗ್ರಾಮಗಳಿಗೂ ಮಾದರಿ ಎಂದರು.

ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಹಾಗೂ ವಾಗ್ಮಿ ಮೈಸೂರಿನ ಪ್ರೊ. ಕೃಷ್ಣೇಗೌಡ ಕಾರಂತರ ಈ ಪ್ರಶಸ್ತಿ ಸ್ವೀಕರಿಸಿ ತನ್ನ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. ಜೀವನದಿಂದ ಹೊರಗೆ ಹೋಗಿ ಬದುಕು ಹೇಗಿದೆ ಎನ್ನುವುದನ್ನು ಸಾಹಿತ್ಯ ಕಲಿಸಿಕೊಡುತ್ತದೆ. ಕಾರಂತರಂತಹವರನ್ನು ಹುಟ್ಟಿಸಿಕೊಳ್ಳುವ ಶಕ್ತಿ ಅಲ್ಲಿಯ ಮಣ್ಣಿಗಿರಬೇಕು ಎಂದು ಹೇಳಿದ ಅವರು ಮನುಷ್ಯ ಚೈತನ್ಯಶಾಲಿಯಾಗಿ ಬೆಳೆಯಲು ಅಲ್ಲಿನ ವಾತಾವರಣ ಮುಖ್ಯ. ಸಮುದ್ರ, ಪರ್ವತ, ಹವಾಮಾನ ವೈಪರೀತ್ಯ, ದಟ್ಟವಾದ ಕಾಡು, ಬಿಸಿಲ ಬಾಧೆ, ಚಳಿ ಇವೆಲ್ಲ ಸವಾಲುಗಳಿದ್ದಲ್ಲಿ ಅಲ್ಲಿಯ ಜನರು ಸಾಹಸಿಗಳಾಗುತ್ತಾರೆ ಎನ್ನುವುದಕ್ಕೆ ಶಿವರಾಮ ಕಾರಂತರೇ ಉತ್ತಮ ಉದಾಹರಣೆ ಎಂದು ಹೇಳಿದರು.

ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್.ಶೆಣೈ ಪ್ರಶಸ್ತಿ ಆಯ್ಕೆಯ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭ ಗಾಂಧಿ ಗ್ರಾಮ ಪುರಸ್ಕೃತ ಗ್ರಾಮ ಪಂಚಾಯಿತಿಗಳನ್ನು ಪುರಸ್ಕೃರಿಸಲಾಯಿತು. ಮೇಘಾಲಯದ ರಾಜ್ಯಪಾಲ ಸಿ.ಎಚ್‌.ವಿಜಯ ಶಂಕರ್‌, ಕೋಟದ ಉದ್ಯಮಿ ಆನಂದ ಸಿ ಕುಂದರ್‌ ಅವರನ್ನು ಸನ್ಮಾನಿಸಲಾಯಿತು. ಅಧ್ಯಾಪಕ ನರೇಂದ್ರ ಕುಮಾರ್‌ ಕೋಟ ಮತ್ತು ಕಾರಂತ ಥೀಂ ಪಾರ್ಕ್‌ನ ಮೇಲ್ವಿಚಾರಕರಾಗಿದ್ದ ಪ್ರಶಾಂತ್‌ ಅವರನ್ನು ಗೌರವಿಸಲಾಯಿತು.

ಕಾಪು ವಿಧಾನಸಭಾ ಕ್ಷೇತ್ರ ಶಾಸಕ ಗುರ್ಮೆ ಸುರೇಶ ಶೆಟ್ಟಿ, ಸಹಾಯಕ ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ಕೋಟತಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್‌, ಹರೀಶ ಶೆಟ್ಟಿ ಇದ್ದರು.

ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್ ಸ್ವಾಗತಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಸತೀಶ ಕುಂದರ್ ವಂದಿಸಿದರು. ಪ್ರತಿಷ್ಟಾನದ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ ಮತ್ತು ಜತೆ ಕಾರ್ಯದರ್ಶಿ ಸತೀಶ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.