ಡೈಲಿ ವಾರ್ತೆ:12/DEC/2024

ಪಂಚಮಸಾಲಿ 2ಎ ಮೀಸಲಾತಿ ಹೋರಾಟ: ಶಾಂತಿಯುತ ಅಲ್ಲ, ಇನ್ಮೇಲೆ ಕ್ರಾಂತಿಯುತ ಹೋರಾಟ – ಜಯಮೃತ್ಯುಂಜಯ ಶ್ರೀ ಎಚ್ಚರಿಕೆ

ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಸೋಮವಾರ ನಡೆದ ಪಂಚಮಸಾಲಿ 2ಎ ಮೀಸಲಾತಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್​ ನಡೆಸಿದ್ದಕ್ಕೆ ಮತ್ತಷ್ಟು ಕೆರಳಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಮ್ಮ ಜನ ಇನ್ನಷ್ಟು ಪುಟಿದೇಳುತ್ತಾರೆ ಎಂದಿದ್ದಾರೆ. ಅಲ್ಲದೆ, ಇಷ್ಟು ದಿನ ಶಾಂತಿಯುತ ಹೋರಾಟ ಆಗಿತ್ತು, ಇನ್ಮೇಲೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅನುಮತಿ ಇಲ್ಲದೇ ಲಾಠಿ ಚಾರ್ಜ್​ ಆಗಿದ್ದು ಹೇಗೆ? ಹಾಗೆ ಆಗಿದ್ದೇ ನಿಜವಾದರೆ ಕೂಡಲೇ ಆ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಜಯಮೃತ್ಯುಂಜಯ ಶ್ರೀ ಆಗ್ರಹಿಸಿದ್ದಾರೆ. ಜತೆಗೆ, ನಿಮ್ಮ ಊರಲ್ಲಿ ರಸ್ತೆ ತಡದು ಹೋರಾಟ ಮಾಡಿ ಎಂದು ಎಲ್ಲಾ ಲಿಂಗಾಯತ ಸಮುದಾಯದವರಿಗೆ ಕರೆ ನೀಡಿದ್ದಾರೆ.

ಇತ್ತ ಲಾಠಿ ಚಾರ್ಜ್‌ ಸಮರ್ಥಿಸಿಕೊಂಡಂತೆ ಮಾತನಾಡಿರುವ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಗಲಾಟೆ ಮಾಡುವ ಉದ್ದೇಶದಿಂದಲೇ ಹೋರಾಟಗಾರರು ಬಂದಿದ್ದರು ಎಂದಿದ್ದಾರೆ.

ಏತನ್ಮಧ್ಯೆ, ಪಂಚಮಸಾಲಿಗಳಿಂದಲೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಭವಿಷ್ಯ ನುಡಿದಿದ್ದಾರೆ. ಕ್ರಿಮಿನಲ್ ಸರ್ಕಾರ ಎಂದು ಬಿಜೆಪಿ ನಾಯಕ ಸಿಟಿ ರವಿ ಗುಡುಗಿದ್ದಾರೆ.

ರಾಜ್ಯದಾದ್ಯಂತ ರಸ್ತೆ ತಡೆಗೆ ಕರೆ
ಪಂಚಮಸಾಲಿ ಸಮುದಾಯದ ಮೇಲೆ ಲಾಠಿಚಾರ್ಜ್ ಖಂಡಿಸಿ ಇಂದು ರಾಜ್ಯಾದ್ಯಂತ ರಸ್ತೆ ತಡೆದು ಧರಣಿ ನಡೆಸಲು ಜಯಮೃತ್ಯುಂಜಯ ಶ್ರೀ ಕರೆ ನೀಡಿದ್ದಾರೆ. ನಿಮ್ಮ ನಿಮ್ಮ ಊರಲ್ಲಿ ರಸ್ತೆ ತಡೆದು ಹೋರಾಟ ಮಾಡಿ ಎಂದು ಅವರು ಹೇಳಿದ್ದಾರೆ. ಇಂದು ಹಿರೇಬಾಗೇವಾಡಿ ಟೋಲ್ ನಾಕಾ ಬಂದ್ ಮಾಡುತ್ತೇವೆ. ಯಾವುದೇ ಕಾರಣಕ್ಕೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಪಂಚಮಸಾಲಿ ಮೀಸಲಾತಿ ನೀಡದಂತೆ ಮನವಿ ಸಲ್ಲಿಸಿದೆ. ಒಕ್ಕೂಟದ ಮನವಿಗೆ ಪರಿಶೀಲನೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದಿನಿಂದ ಮತ್ತೆ ಕಲಾಪ ನಡೆಯಲಿದ್ದು, ಲಾಠಿ ಜಾರ್ಜ್ ವಿಚಾರ ಸದನದ ಒಳಗೂ ಮತ್ತು ಹೊರಗೂ ಸದ್ದು ಮಾಡಲಿದೆ.