

ಡೈಲಿ ವಾರ್ತೆ:16/DEC/2024



ಉಳ್ಳಾಲ: ತಂಗಿ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆ ಸೋಮೇಶ್ವರ ಸಮುದ್ರದಲ್ಲಿ ನೀರುಪಾಲು
ಉಳ್ಳಾಲ: ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಹಿಳೆಯೊಬ್ಬರು ಸಮುದ್ರ ಪಾಲಾಗಿ ಮೃತಪಟ್ಟ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ಸಂಭವಿಸಿದೆ.
ದೇರೆಬೈಲ್ ದಿ. ಜಗದೀಶ್ ಭಂಡಾರಿ ಅವರ ಪತ್ನಿ ಉಷಾ (72) ಮೃತ ದುರ್ದೈವಿ.
ಉಷಾ ಅವರ ತಂಗಿ ನಿಶಾ ಭಂಡಾರಿ ಅವರ ಗಂಡ ಕರುಣಾಕರ ಭಂಡಾರಿ ಎಂಬವರು ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಸೋಮವಾರ ಪಿಂಡ ಪ್ರದಾನ ವಿಧಿ ಇದ್ದ ಕಾರಣ ಅದರಲ್ಲಿ ಪಾಲ್ಗೊಳ್ಳಲು ಸಂಬಂಧಿಕರೊಂದಿಗೆ ಸೋಮೇಶ್ವರಕ್ಕೆ ಬಂದಿದ್ದರು. ಪಿಂಡ ಪ್ರದಾನದ ಬಳಿಕ ಸಮುದ್ರದಲ್ಲಿ ಸ್ನಾನ ಪ್ರಕ್ರಿಯೆ ಮುಗಿಸುತ್ತಿದ್ದಾಗ ಸಂಬಂಧಿಕರು ನೋಡುತ್ತಿದ್ದಂತೆಯೇ ಕಾಲು ಜಾರಿ ಸಮುದ್ರ ಪಾಲಾಗಿದ್ದಾರೆ. ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಸಮುದ್ರಕ್ಕೆ ಧುಮುಕಿದ್ದು, ಅವರನ್ನು ಸಮುದ್ರ ತೀರಕ್ಕೆ ತರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಷಾ ಅವರು ಏನ್.ಎಮ್.ಪಿ.ಟಿಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿ ನಿವೃತ್ತರಾಗಿದ್ದರು. ಮೃತರು ಪುತ್ರಿಯನ್ನು ಅಗಲಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.