ಡೈಲಿ ವಾರ್ತೆ:17/DEC/2024

ಹೂಡೆ: ತೆಂಗಿನಕಾಯಿ ನಾರು ಸಾಗಿಸುತ್ತಿದ್ದ ವಾಹನ ಬೆಂಕಿಗಾಹುತಿ – ತಪ್ಪಿದ ಭಾರೀ ಅನಾಹುತ!

ಉಡುಪಿ: ತೆಂಗಿನ ಕಾಯಿ ನಾರು ಸಾಗಿಸುತ್ತಿದ್ದ ವಾಹನಕ್ಕೆ ರಾತ್ರಿ ಬೆಂಕಿ ತಗುಲಿ ಸುಟ್ಟ ಘಟನೆ ಡಿ. 16 ರಂದು ಸೋಮವಾರ ರಾತ್ರಿ ಹೂಡೆ ಕೆನರಾ ಬ್ಯಾಂಕ್ ಬಳಿ
ಸಂಭವಿಸಿದೆ.

ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಘಟನೆ ನಡೆದಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ‌. ತಕ್ಷಣ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿಸೇಲ್ ಟ್ಯಾಂಕ್’ಗೆ ಬೆಂಕಿ ತಗಲುವ ಮುನ್ನ ಅಗ್ನಿ ನಂದಿಸುವಲ್ಲಿ ಯಶಸ್ವಿಯಾದ ಕಾರಣ ಭೀಕರ ದುರಂತವೊಂದು ತಪ್ಪಿದೆ.
ಪಕ್ಕದಲ್ಲೆ ವಸತಿ, ಹೊಟೇಲ್,ಅಂಗಡಿ, ಕೆಫೆಯಿದ್ದು ಬೆಂಕಿ ವ್ಯಾಪಿಸಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಸೂಕ್ತ ಸಮಯದಲ್ಲಿ ಅಗ್ನಿ ಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ.

ಈ ಭಾಗದಲ್ಲಿ ವಿದ್ಯುತ್ ತಂತಿ ಜೋತು ಬಿದ್ದು ಹಲವು ಬಾರಿ ಶಾರ್ಟ್ ಸರ್ಕ್ಯೂಟ್ ನಿಂದ ಕಿಡಿ ಹಾರುತ್ತಿರುತ್ತದೆ. ಇದೀಗ ಇಂತಹ ದೊಡ್ಡ ಅನಾಹುತವಾಗಿದೆ‌. ಈ ಕುರಿತು ವಿದ್ಯುತ್ ಇಲಾಖೆಯವರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ