ಡೈಲಿ ವಾರ್ತೆ:19/DEC/2024
ಭಟ್ಕಳ: ಶಾಲಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಬಾವಿಗೆ ಬಿದ್ದು ಮೃತ್ಯು
ಭಟ್ಕಳ: ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಡಿ. 18 ರಂದು ಬುಧವಾರ ರಾತ್ರಿ ಭಟ್ಕಳದ ನೂರು ಮಸೀದಿ ಬಳಿ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಗಾಣದಾಳದ ಕಾಂಡ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯ ನಿರುಪಾದಿ ದುರ್ಗಪ್ಪ ಹರಿಜನ (14) ಎಂದು ಗುರುತಿಸಲಾಗಿದೆ.
ಗಾಣದಾಳ ಶಾಲೆಯ 5 ರಿಂದ 8ನೇ ತರಗತಿಯ 100 ವಿದ್ಯಾರ್ಥಿಗಳು ಮತ್ತು 13 ಶಿಕ್ಷಕರ ತಂಡ ಜೋಗ ಫಾಲ್ಸ್, ಕೊಲ್ಲೂರು ಹಾಗೂ ಇತರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಎರಡು ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದರು. ನಿನ್ನೆ ರಾತ್ರಿ ಗಾಣದಾಳ ದಿಂದ ಹೊರಟಿದ್ದ ವಿದ್ಯಾರ್ಥಿಗಳು ಬೆಳಿಗ್ಗೆ ಜೋಗ ಜಲಪಾತ ವೀಕ್ಷಿಸಿ, ಕೊಲ್ಲೂರಿಗೆ ಅರಬೈಲ್ ಘಟ್ಟದ ಮಾರ್ಗ ವಾಗಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ರಾತ್ರಿ 7.30 ರ ಸುಮಾರಿಗೆ ಭಟ್ಕಳದಲ್ಲಿ ಮಾತ್ರೆ ಖರೀದಿಸಲು ವಾಹನ ನಿಲ್ಲಿಸಲಾಗಿತ್ತು.
ತಾಲೂಕು ಪಂಚಾಯತ್ ಕಚೇರಿ ಎದುರಿನ ಔಷಧಿ ಅಂಗಡಿಗೆ ಬಂದಿದ್ದ ವಿದ್ಯಾರ್ಥಿ ಮೂತ್ರ ವಿಸರ್ಜನೆಗೆಂದು ಹೋದಾಗ, ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸ್ಥಳೀಯರು ಮತ್ತು ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿ ಬಾಲಕನನ್ನು ತಕ್ಷಣವೇ ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.