ಡೈಲಿ ವಾರ್ತೆ:19/DEC/2024
ಮುಂಬೈ: ಭೀಕರ ಬೋಟ್ ದುರಂತ – ನೌಕಾಪಡೆಯ ಮೂವರು ಸೇರಿ 13 ಮಂದಿ ಮೃತ್ಯು
ಮುಂಬೈ: ಇಂಜಿನ್ ಪ್ರಯೋಗ ನಡೆಸುತ್ತಿದ್ದ ಭಾರತೀಯ ನೌಕಾಪಡೆಯ ವೇಗದ ಬೋಟ್ ಮುಂಬೈ ಕರಾವಳಿಯಲ್ಲಿ ಬುಧವಾರ ಸಂಜೆ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರ ಬೋಟ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಪ್ರಯೋಗ ನಡೆಸುತ್ತಿದ್ದ ಬೋಟ್ ನಲ್ಲಿದ್ದ ನೌಕಾಪಡೆಯ ಅಧಿಕಾರಿ ಸೇರಿದಂತೆ 13 ಜನರು ಮತ್ತು ಮೂಲ ಉಪಕರಣ ತಯಾರಕರ ಇಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
110 ಜನರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಗೆ ನೌಕಾ ಪಡೆ ಬೋಟ್ ಅಪ್ಪಳಿಸುತ್ತಿರುವ ಅಪಘಾತದ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಪಘಾತ ಸಂಭವಿಸಿದ ಎರಡು ಗಂಟೆಗಳ ನಂತರ ಸ್ಪೀಡ್‌ಬೋಟ್ ಡಿಕ್ಕಿ ಹೊಡೆಯುವ ವಿಡಿಯೋ ಹೊರಬಿದ್ದಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ 94 ಮಂದಿಯನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಗೇಟ್‌ವೇ ಆಫ್ ಇಂಡಿಯಾದಿಂದ ಮುಂಬೈ ಕರಾವಳಿಯ ಎಲಿಫೆಂಟಾ ದ್ವೀಪಕ್ಕೆ ಬೋಟ್ ಪ್ರಯಾಣಿಸಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಪ್ರಯೋಗದಲ್ಲಿ ನಿರತವಾಗಿದ್ದ ನೌಕಾಪಡೆಯ ಬೋಟ್ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರಿದ್ದ ಬೋಟ್ ಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಬೋಟ್ ಮುಳುಗಲು ಪ್ರಾರಂಭಿಸಿತು ಎಂದು ಮೊದಲು ವರದಿಯಾಗಿದೆ. ಹೆಚ್ಚಿನ ದೃಶ್ಯಗಳು ಲೈಫ್ ಜಾಕೆಟ್‌ಗಳನ್ನು ಧರಿಸಿರುವ ಪ್ರಯಾಣಿಕರನ್ನು ರಕ್ಷಿಸಿ ಮತ್ತೊಂದು ಬೋಟ್ ಗೆ ಸ್ಥಳಾಂತರಿಸುವುದನ್ನು ಆರಂಭಿಸಲಾಯಿತು. ಈ ವೇಳೆ ಪ್ರಯಾಣಿಕರಿದ್ದ ಬೋಟ್ ನೀರಿನ ಮೇಲ್ಮೈಗೆ ವಾಲಲು ಪ್ರಾರಂಭಿಸಿತು. ಈ ಹೊತ್ತಿಗೆ ಕೆಲವರು ಮುಳುಗಿ ಮೃತಪಟ್ಟರು. ಸದ್ಯ 13 ಜನ ಮೃತಪಟ್ಟರೆ, 94 ಮಂದಿಯನ್ನು ರಕ್ಷಣೆ ಮಾಡಿರುವ ಮಾಹಿತಿ ಲಭಿಸಿದೆ.