ಡೈಲಿ ವಾರ್ತೆ:23/DEC/2024

ಶಿವಮೊಗ್ಗ: ಹೆಲಿಪ್ಯಾಡ್ ಸರ್ಕಲ್ ಬಳಿ ಬೈಕ್ – ಬಸ್ ನಡುವೆ ಭೀಕರ ಅಪಘಾತ – ಇಬ್ಬರು ಮೃತ್ಯು!

ಶಿವಮೊಗ್ಗ: ಖಾಸಗಿ ಬಸ್ ವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಡಿ. 22 ರಂದು ಭಾನುವಾರ ರಾತ್ರಿ 10.30 ರ ಸುಮಾರಿಗೆ ನಗರದ ಹೆಲಿಪ್ಯಾಡ್ ಸರ್ಕಲ್ ನಲ್ಲಿ ಸಂಭವಿಸಿದೆ.

ಮೃತರನ್ನು ನಗರದ ಜೆಎನ್ಎನ್’ಸಿಇ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ, ಮೂಲತಃ ಮಲೆಬೆನ್ನೂರು ಸಮೀಪದ ನಿವಾಸಿಯಾದ ಜೀವನ್ (20) ಹಾಗೂ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ನೌಕರ ರೋಹಿತ್ (23) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ.

ಜೀವನ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ರೋಹಿತ್ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಇವರಿಬ್ಬರು ಸಂಬಂಧಿಗಳಾಗಿದ್ದು, ಕೆಟಿಎಂ ಬೈಕ್ ನಲ್ಲಿ ಬೊಮ್ಮನಕಟ್ಟೆ ಬಡಾವಣೆಯಲ್ಲಿರುವ ಸಂಬಂಧಿಯೋರ್ವರ ನಿವಾಸಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಖಾಸಗಿ ಸಮಾರಂಭವೊಂದಕ್ಕೆ ಬಾಡಿಗೆ ಮೇಲೆ ತೆರಳಿದ್ದ ಖಾಸಗಿ ಬಸ್ ಹಿಂದಿರುಗುತ್ತಿದ್ದ ವೇಳೆ ಹೆಲಿಪ್ಯಾಡ್ ಸರ್ಕಲ್ ಮುಖ್ಯರಸ್ತೆಯಿಂದ ಅಶೋಕನಗರ ಮುಖ್ಯರಸ್ತೆಗೆ ತೆರಳುವ ವೇಳೆ ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪಶ್ಚಿಮ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.