ಡೈಲಿ ವಾರ್ತೆ:24/DEC/2024
ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್ – ಬೃಹತ್ ಪ್ರತಿಭಟನೆ
ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆ ನೀಡಿರುವ ಮಾತುಗಳು ಅಕ್ಷಮ್ಯ. ಅಮಿತ್ ಶಾ ಅವರು ಅಂಬೇಡ್ಕರ್ ಪ್ರತಿಮೆ ಎದುರು ಮಂಡಿಯೂರಿ ಕುಳಿತು ದೇಶದ ಜನರ ಬಳಿ ಕ್ಷಮೆ ಕೇಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳು ಮಂಗಳವಾರ ಬೆಳ್ಳಂಬೆಳಗ್ಗೆ ಗದಗ-ಬೆಟಗೇರಿ ಬಂದ್ ಗೆ ಚಾಲನೆ ನೀಡಿದರು.
‘ದಲಿತ ಸಂಘರ್ಷ ಸಮಿತಿ, ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ, ರೈತ ಸಂಘಟನೆಗಳು, ಕಾರ್ಮಿಕರು, ಕಟ್ಟಡ ಕಾರ್ಮಿಕರ ಸಂಘಟನೆಗಳು, ಬಸವದಳ, ಆಟೊ ಚಾಲಕರು, ಮಾಲೀಕರ ಸಂಘ, ಜೈಭೀಮ್ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಭೀಮ್ ಆರ್ಮಿ, ಬೀದಿಬದಿ ವ್ಯಾಪಾರಸ್ಥರ ಸಂಘ, ಜಿಲ್ಲಾ ಸ್ಲಂ ಸಮಿತಿ, ಕನ್ನಡಪರ ಸಂಘಟನೆಗಳು ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳ ಮುಖಂಡರು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು.
ಬೆಟಗೇರಿ ಬಸ್ ನಿಲ್ದಾಣ, ಗದಗ ಹೊಸ ಮತ್ತು ಹಳೆ ಬಸ್ ನಿಲ್ದಾಣ, ಮುಳಗುಂದ ನಾಕಾ, ಹಾತಲಗೇರಿ ನಾಕಾ, ಟಿಪ್ಪು ವೃತ್ತ ಸೇರಿ ನಗರದ ಪ್ರಮುಖ ವೃತ್ತ ಹಾಗೂ ಪ್ರದೇಶಗಳಲ್ಲಿ ದಲಿತ ಮುಖಂಡರು ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಬಂದ್ ಆಚರಿಸಿದರು.
ಗದಗ ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ಬದಲಾವಣೆ ಮಾಡಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಕಲಬುರಗಿಯಲ್ಲಿ ಸಾರಿಗೆ ಸ್ಥಗಿತ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನದ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಕಲಬುರ್ಗಿ ಬಂದ್ ವೇಳೆ ಪ್ರತಿಭಟನೆಕಾರರು ಬೆಳಿಗ್ಗೆಯಿಂದಲೇ ರಸ್ತೆಗೆ ಇಳಿದಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಸಂಪೂರ್ಣ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಆಟೋ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಆರಂಭಗೊಳಿಸಲು ದಲಿತ ಪರ ಸಂಘಟನೆ ಮುಖಂಡರು ಅವಕಾಶ ನೀಡಿಲ್ಲ.
ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಬೆಳಗ್ಗೆ 8 ಗಂಟೆಗೆ ದಲಿತಪರ ಸಂಘಟನೆ ಹಾಗೂ ಇತರ ಸಂಘಟನೆಯ ಮುಖಂಡರು ಅಮಿತ್ ಶಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ.
ಈ ವೇಳೆಯಲ್ಲಿ ಕೂಡಲೇ ಅಮಿತ್ ಶಾ ಅವರನ್ನು ಕೇಂದ್ರ ಸಂಪುಟದಿಂದ ಕೈ ಬಿಡಬೇಕೆಂದು ಪ್ರಧಾನಿಗೆ ಆಗ್ರಹಿಸಿದರು. ಆ ನಗರದ ಸರ್ದಾರ್ ವಲ್ಲಭಾಯಿ ಪಟೇಲ್ ಪುರುಕ್ತ ಜಗತ್ತು ವಿರುದ್ಧ ಗನ್ ಸರ್ಕಲ್ ಹುಮ್ನಾಬಾದ್ ಸರ್ಕಲ್ ಖರ್ಗೆ ಪೆಟ್ರೋಲ್ ಬಂಕ್ ವಿರುದ್ಧ ರಾಮ ಮಂದಿರ ಹೈಕೋರ್ಟ್ ವಿರುದ್ಧ ಆಳಂದ್ ನಾಕಾ ವೃತ್ತವು ಸೇರಿದಂತೆ ಹಲವಡೆಗಳಲ್ಲಿ ದಲಿತ ಮುಖಂಡರು ಬೆಳಿಗ್ಗೆಯಿಂದಲೇ ನಾಕಾಬಂದಿ ಮಾಡಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಆದರೆ ಕಾಲೇಜು ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳಿಗೆ ಬಂದ್ ಹಿನ್ನೆಲೆಯಲ್ಲಿ ರಜೆ ಇಲ್ಲದ ಕಾರಣ ನೌಕರರು ಕೆಲಸದ ಸ್ಥಳಕ್ಕೆ ಹೋಗಲು ಪರದಾಡಿದ ದೃಶ್ಯ ಕಂಡು ಬಂದಿದೆ.
ಕೇಂದ್ರ ಬಸ್ ನಿಲ್ದಾಣದಿಂದ ಯಾವುದೇ ಬಸ್ ಸದ್ಯಕ್ಕೆ ಸಂಚರಿಸದ ಹಿನ್ನೆಲೆಯಲ್ಲಿ, ಕಳೆದ ರಾತ್ರಿ ಕಲಬುರ್ಗಿಗೆ ಆಗಮಿಸಿದ್ದ ಪ್ರಯಾಣಿಕರು ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿರುವ ದೃಶ್ಯ ಕಂಡು ಬಂತು.