ಡೈಲಿ ವಾರ್ತೆ:27/DEC/2024

ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಸಮ್ಮಿಲನ- ೫೦’ ಉದ್ಘಾಟನೆ – ಪರಂಪರೆಯ ರುಚಿಶುದ್ಧಿಯ ಸಾಲಿಗ್ರಾಮ ಮಕ್ಕಳ ಮೇಳ-ಡಾ. ಆದರ್ಶ ಹೆಬ್ಬಾರ್

ಕೋಟ: ಸುಮಾರು ಎಪ್ಪತ್ತರ ದಶಕದಿಂದ ಯಕ್ಷಗಾನದ ಅನೇಕ ಪ್ರಯೋಗಗಳು, ಹೊಸ ಸರಕುಗಳು, ಅಪಸವ್ಯಗಳು ಯಕ್ಷಗಾನ ಕ್ಷೇತ್ರವನ್ನು ಆಕ್ರಮಿಸಿದರೂ ಸಾಲಿಗ್ರಾಮ ಮಕ್ಕಳ ಮೇಳ ಮಾತ್ರ ಅಂದಿನಿಂದ ಇಂದಿನವರೆಗೆ ಅದೇ ರುಚಿಶುದ್ಧಿಯ ಪರಂಪರೆಯೊಂದಿಗೆ ರಂಜನೆಯ ನಿರಂತರತೆಯನ್ನು ಕಾಪಿಟ್ಟುಕೊಂಡು ಬಂದಿರುವುದು ಅಭಿನಂದನೀಯ.
ನಿರಂತರ ಮತ್ತೆ ಮತ್ತೆ ಬೇರೆಬೇರೆ ಮಕ್ಕಳಿಗೆ ಹೆಜ್ಜೆ ಕಲಿಸಿ ಹೆಜ್ಜೆ ಹಾಕಿಸಿ, ಇಂದು ಸುವರ್ಣ ಪರ್ವವನ್ನು ಕಾಣುತ್ತಿರುವ ಮಕ್ಕಳ ಮೇಳದ ಸ್ಥಾಪಕರಾದ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರ ಶ್ರಮ ಅನುಪಮವಾದುದುದು ಎಂದು ಕುಂದಾಪುರ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಆದರ್ಶ ಹೆಬ್ಬಾರ್ ಅಭಿಪ್ರಾಯಪಟ್ಟರು.
ಡಿಸೆಂಬರ್ 25 ರಂದು ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ನೆರವಿನೊಂದಿಗೆ ಹಯಗ್ರೀವ ಸಭಾ ಮಂಟಪದಲ್ಲಿ ಯಕ್ಷಗಾನದ ಸೀಮೋಲ್ಲಂಘನಗೈದ ಐತಿಹಾಸಿಕ ದಾಖಲೆಯ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವದ ಐದನೆಯ ಕಾರ್ಯಕ್ರಮ ‘ಸುವರ್ಣ ಸಮ್ಮಿಲನ-೫೦’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಮೇಳ ಟ್ರಸ್ಟ್ನ ಅಧ್ಯಕ್ಷ ಕೆ. ಬಲರಾಮ ಕಲ್ಕೂರ ಅಧ್ಯಕ್ಷತೆವಹಿಸಿದ್ದರು.
ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಉಡುಪಿ ಕ.ಸಾ.ಪ. ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಕೆ ಮಹೇಶ ಉಡುಪ, ಉಪಾಧ್ಯಕ್ಷ ಜನಾರ್ದನ ಹಂದೆ, ಸದಸ್ಯ ಶ್ರೀಕಾಂತ ಉಡುಪ ಉಪಸ್ಥಿತರಿದ್ದರು ಎಚ್.
ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿ, ವಿನಿತ ವಂದಿಸಿದರು. ಕುಮಾರಿ ಕಾವ್ಯ ಹಂದೆ ಮತ್ತು ಮಾಧುರಿ ಶ್ರೀರಾಮ್ ನಿರೂಪಿಸಿದರು.


ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ, ಯಕ್ಷ ಗುರು ಕೋಟದ ಕೆ. ನರಸಿಂಹ ತುಂಗ ಅವರನ್ನು ಸುವರ್ಣ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮೇಳಕ್ಕೆ ವಿಶೇಷ ಸಹಕಾರ ನೀಡಿದವರನ್ನು ಸುವರ್ಣ ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಮಕ್ಕಳ ಮೇಳದ 50 ವರ್ಷಗಳ ಹಿರಿಯ ಕಿರಿಯ ವಿದ್ಯಾರ್ಥಿಗಳು ಜೊತೆಯಾಗಿ ಗುರು ಶಿಷ್ಯ ಸಂವಾದದಲ್ಲಿ ತಮ್ಮ ನೆನಪುಗಳ ಬುತ್ತಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮಕ್ಕಳ ಮೇಳದ ಹಿರಿ ಕಿರಿಯ ಕಲಾವಿದರಿಂದ ವೀರ ವೃಷಸೇನ, ಬಬ್ರುವಾಹನ ಪ್ರಸಂಗಗಳು ಪ್ರದರ್ಶನಗೊಂಡವು.