ಡೈಲಿ ವಾರ್ತೆ:28/DEC/2024

ಸರಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ

ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ಪಂಚಭೂತಗಳಲ್ಲಿ ಲೀನರಾದರು. ದೆಹಲಿ ಏಮ್ಸ್‌ನಲ್ಲಿ ಡಿಸೆಂಬರ್ 26 ರಂದು ರಾತ್ರಿ ನಿಧನರಾದ ಅವರ ಅಂತ್ಯಸಂಸ್ಕಾರ ದೆಹಲಿ ನಿಗಮ್‌ಬೋಧ್ ಘಾಟ್‌ನಲ್ಲಿ ಸಿಖ್‌ ಸಂಪ್ರದಾಯ ಪ್ರಕಾರ ನೆರವೇರಿತು.

ಭಾರತದ ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ಅವರ ಅಂತಿಮ ಸಂಸ್ಕಾರ ಇಂದು (ಡಿಸೆಂಬರ್ 28) ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸಿಖ್‌ ಸಂಪ್ರದಾಯದ ಪ್ರಕಾರ ಮನಮೋಹನ ಸಿಂಗ್ ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ನಡೆಯಿತು. ಅವರು ಪಂಚ ಭೂತಗಳಲ್ಲಿ ವಿಲೀನರಾದರು.

ಇದಕ್ಕೂ ಮೊದಲು, ನಿಗಮ್‌ಬೋಧ್ ಘಾಟ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸಚಿವ ಸಂಪುಟದ ಸದಸ್ಯರು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷ ನಾಯಕರು ಈ ಸಂದರ್ಭದಲ್ಲಿ ಮನಮೋಹನ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ಮತ್ತು ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಸೇರಿದಂತೆ ಹಲವಾರು ವಿದೇಶಿ ಗಣ್ಯರು ಡಾ ಸಿಂಗ್ ಅವರ ಅವಧಿಯ ರಾಜತಾಂತ್ರಿಕ ಸಂಬಂಧಗಳನ್ನು ಸ್ಮರಿಸಿಕೊಂಡು ಸಂತಾಪ ಸೂಚಿಸಿದ್ದಾರೆ.

ನೀಲಿ ಬಣ್ಣದ ಪಗಡಿಯನ್ನು ತಲೆಗೆ ಸುತ್ತಿದ ಡಾ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನೀಲಿ ಬಣ್ಣದ ಪಗಡಿ ಸಾರ್ವಜನಿಕ ಜೀವನದಲ್ಲಿ ಅವರ ಗುರುತಾಗಿತ್ತು.

ಎಐಸಿಸಿ ಕೇಂದ್ರ ಕಚೇರಿಯಿಂದ ನಿಗಮ್‌ಬೋಧ ಘಾಟ್‌ಗೆ ಅಂತಿಮ ಯಾತ್ರೆ
ಡಾ ಮನಮೋಹನ್ ಸಿಂಗ್ ಅವರು ಡಿಸೆಂಬರ್ 26 ರಂದು ರಾತ್ರಿ ದೆಹಲಿಯ ಏಮ್ಸ್‌ನಲ್ಲಿ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಮಾರನೇ ದಿನ ಬೆಳಗ್ಗೆ ದೆಹಲಿಯ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಕೇಂದ್ರ ಸರ್ಕಾರ ನಿನ್ನೆ (ಡಿಸೆಂಬರ್ 27) ಮತ್ತು ಇಂದು ರಜೆ ಘೋಷಿಸಿದ್ದು, ಒಟ್ಟು ಏಳು ದಿನಗಳ ಶೋಕಾಚರಣೆ ಘೋಷಿಸಿತ್ತು. ಇಂದು (ಡಿಸೆಂಬರ್ 28) ಬೆಳಗ್ಗೆ ದೆಹಲಿಯ ಎಐಸಿಸಿ ಕಚೇರಿಗೆ ಡಾ ಸಿಂಗ್ ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು. ಅಲ್ಲಿ ಸಾರ್ವಜನಿಕರಿಗೆ ಮತ್ತು ಕಾಂಗ್ರೆಸ್ ನಾಯಕರಿಗೆ ಅಂತಿಮ ದರ್ಶನದ ಅವಕಾಶ ಮಾಡಿಕೊಡಲಾಗಿತ್ತು. ಅದಾಗಿ ಅಲ್ಲಿಂದ ಮೆರವಣಿಗೆ ಮೂಲಕ ನಿಗಮ್‌ಬಾಧ್‌ ಘಾಟ್‌ಗೆ ಅವರ ಪಾರ್ಥಿವ ಶರೀರವನ್ನು ಹೂವುಗಳಿಂದ ಅಲಂಕೃತವಾದ ವಾಹನದಲ್ಲಿ ಕೊಂಡೊಯ್ಯಲಾಗಿದೆ.
ಭಾರತದ ಆರ್ಥಿಕ ಸುಧಾರೀಕರಣದ ತೀರ್ಮಾನ ತೆಗೆದುಕೊಂಡ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ನಾಯಕರು ಅಲ್ಲಿ ನೆರೆದಿದ್ದರು. ಮನಮೋಹನ ಸಿಂಗ್ ಅಮರ್ ರಹೇ ಘೋಷಣೆ ಮುಗಿಲುಮುಟ್ಟಿತ್ತು.

ಏಳು ದಿನಗಳ ಶೋಕಾಚರಣೆ
ಕೇಂದ್ರ ಸರ್ಕಾರವು ಜನವರಿ 1 ರವರೆಗೆ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದು, ಈ ಸಮಯದಲ್ಲಿ ರಾಷ್ಟ್ರದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುತ್ತದೆ. ಎಲ್ಲಾ ಭಾರತೀಯ ಮಿಷನ್‌ಗಳು ಮತ್ತು ಹೈಕಮಿಷನ್‌ಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಶನಿವಾರದಂದು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಅರ್ಧ ದಿನದ ರಜೆಯನ್ನು ಘೋಷಿಸಲಾಗುತ್ತದೆ.

ಕೇಂದ್ರ ಸರ್ಕಾರದ ಜೊತೆಗೆ, ಕರ್ನಾಟಕ ಹರಿಯಾಣ, ಪಂಜಾಬ್, ಮಣಿಪುರ, ರಾಜಸ್ಥಾನ, ಬಿಹಾರ ಮತ್ತು ಅಸ್ಸಾಂ ಸೇರಿದಂತೆ ಹಲವಾರು ರಾಜ್ಯಗಳು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಗೌರವಾರ್ಥವಾಗಿ ಅಧಿಕೃತ ಶೋಕಾಚರಣೆಯನ್ನು ಘೋಷಿಸಿವೆ.