ಡೈಲಿ ವಾರ್ತೆ: 07/JAN/2025

ಕಾಲಿವುಡ್​ ನಟ ಅಜಿತ್ ಅವರ ಕಾರು ಅಪಘಾತ: ವಿಡಿಯೋ ವೈರಲ್

ಖ್ಯಾತ ನಟ ಅಜಿತ್ ಅವರು ದೊಡ್ಡ ಸಾಹಸಿ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಕಾರುಗಳ ಬಗ್ಗೆ ಅವರಿಗೆ ವಿಶೇಷವಾದ ಕ್ರೇಜ್ ಇದೆ. ಅದರಲ್ಲೂ ಕಾರ್​ ರೇಸ್​ ಮತ್ತು ಬೈಕ್​ ರೇಸ್​ ಎಂದರೆ ಅವರಿಗೆ ಸಖತ್ ಇಷ್ಟ. ಆದರೆ ಅದರಿಂದ ಅಪಾಯ ಕೂಡ ಎದುರಾಗಿದೆ. ದುಬೈನಲ್ಲಿ ಕಾರು ರೇಸ್​ ಅಭ್ಯಾಸ ಮಾಡುವ ಸಂದರ್ಭದಲ್ಲಿ ಅಜಿತ್ ಅವರಿಗೆ ಅಪಘಾತ ಆಗಿದೆ. 180 ಕಿಮೀ ವೇಗದಲ್ಲಿ ಅಜಿತ್ ಅವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ತಡೆಗೋಡೆಗೆ ಡಿಕ್ಕಿಯಾಗಿದೆ.

ಕಾರು ಅಪಘಾತ ಆದ ಕೂಡಲೇ ಅಜಿತ್ ಅವರನ್ನು ರಕ್ಷಿಸಲಾಗಿದೆ. ಬಳಿಕ ಆ್ಯಂಬುಲೆನ್ಸ್​ನಲ್ಲಿ ಅವರನ್ನು ಆಸ್ಪತ್ರೆಗೆ ಕಳಿಸಲಾಗಿದೆ. ಈ ಮೊದಲು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಕೂಡ ಅಜಿತ್ ಅವರ ಕಾರು ಅಪಘಾತಕ್ಕೆ ಈಡಾಗಿತ್ತು. ಆಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈಗ ಮತ್ತೆ ಅದಕ್ಕಿಂತಲೂ ಭಯಂಕರವಾದ ರೀತಿಯಲ್ಲಿ ಅವರ ಕಾರು ಅಪಘಾತ ಸಂಭವಿಸಿದೆ.

‘ದುಬೈ 24 ಅವರ್ಸ್ ರೇಸ್​’ (24 ಹೆಚ್​ ದುಬೈ 2025) ಸ್ಪರ್ಧೆಯಲ್ಲಿ ಅಜಿತ್ ಅವರು ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 6 ಗಂಟೆ ದೀರ್ಘ ಅವಧಿಯ ಪರೀಕ್ಷೆಯಲ್ಲಿ ಅಜಿತ್ ಪಾಲ್ಗೊಂಡಿದ್ದರು. ಈ ಪರೀಕ್ಷೆ ಪೂರ್ಣಗೊಳ್ಳಲು ಇನ್ನೇನು ಕೆಲವೇ ನಿಮಿಷಗಳು ಇರುವಾಗ ಅಜಿತ್ ಅವರ ಕಾರು ತಡೆಗೋಡೆಗೆ ಡಿಕ್ಕಿ ಆಯಿತು. ಅಜಿತ್ ಅವರು ದುಬೈನಲ್ಲಿ ತಮ್ಮದೇ ರೇಸಿಂಗ್ ತಂಡವನ್ನು ಹೊಂದಿದ್ದಾರೆ.