ಡೈಲಿ ವಾರ್ತೆ: 10/JAN/2025
ನ್ಯಾಯಾಲಯದಲ್ಲಿ ದರ್ಶನ್, ಪವಿತ್ರಾ ಗೌಡ ಮುಖಾಮುಖಿ: ಫೆ. 25ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ಷರತ್ತಿನ ಪ್ರಕಾರ ಜ. 10 ರಂದು ಶುಕ್ರವಾರ ಬೆಂಗಳೂರಿನ ಸಿಸಿಹೆಚ್ 57ರ ನ್ಯಾಯಾಲಯದ ಮುಂದೆ ಹಾಜರಾದರು. ದರ್ಶನ್, ಪವಿತ್ರಾ ಗೌಡ, ಪ್ರದೋಶ್, ನಾಗರಾಜ್ ಸೇರಿದಂತೆ ಎಲ್ಲ 17 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಆರೋಪಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಪ್ರತಿ ತಿಂಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಅದರಂತೆ, ಎಲ್ಲಾ ಆರೋಪಿಗಳು ನ್ಯಾಯಾಧೀಶರೆದುರು ಹಾಜರಾಗಿದ್ದಾರೆ. ಆರೋಪಿಗಳ ಹಾಜರಿ ಪಡೆದುಕೊಂಡ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ 25ಕ್ಕೆ ಮುಂದೂಡಿ ಆದೇಶಿಸಿದರು.
ದರ್ಶನ್ ತಮ್ಮ ಆಪ್ತ, ನಟ ಧನ್ವೀರ್ ಜೊತೆ ಕಾರಿನಲ್ಲಿ ನ್ಯಾಯಾಲಯಕ್ಕೆ ಆಗಮಿಸಿದರು. ಅವರೊಟ್ಟಿಗೆ ವಕೀಲರು ಇದ್ದರು. ನ್ಯಾಯಾಲಯದ ಬಳಿ ಬಂದ ದರ್ಶನ್ ಇಂದು ಕುಂಟುತ್ತಾ ನಡೆಯದೆ ಆರಾಮವಾಗಿಯೇ ನಡೆಯುತ್ತಾ ನ್ಯಾಯಾಲಯ ಸಂಕೀರ್ಣದ ಒಳಗೆ ಬಂದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ನ್ಯಾಯಾಲಯದಲ್ಲಿ ಮುಖಾಮುಖಿಯಾದರು.